ಕೊರೋನ: 2 ಲಕ್ಷದತ್ತ ಸಾವಿನ ಸಂಖ್ಯೆ ದಾಪುಗಾಲು

ಪ್ಯಾರಿಸ್, ಎ. 24: ನೋವೆಲ್-ಕೊರೋನವೈರಸ್‌ನಿಂದಾಗಿ ಜಗತ್ತಿನಾದ್ಯಂತ ಮೃತಪಟ್ಟವರ ಸಂಖ್ಯೆ 2 ಲಕ್ಷದತ್ತ ದಾಪುಗಾಲಿಡುತ್ತಿದೆ. ಶುಕ್ರವಾರ ಸಂಜೆಯ ವೇಳೆಗೆ ಮೃತಪಟ್ಟವರ ಒಟ್ಟು ಸಂಖ್ಯೆ 1,92,208 ಆಗಿತ್ತು.
ಈವರೆಗೆ ಜಗತ್ತಿನಾದ್ಯಂತ 27,50,877 ಮಂದಿ ರೋಗದ ಸೋಂಕಿಗೆ ಒಳಗಾಗಿದ್ದಾರೆ.
ಈ ರೋಗದಿಂದ ಅತ್ಯಂತ ಹೆಚ್ಚು ಬಾಧೆಗೊಳಗಾದ ಖಂಡ ಯುರೋಪ್ ಆಗಿದೆ. ಅಲ್ಲಿ ಒಟ್ಟು ಸಾವಿನ ಮೂರನೇ ಎರಡರಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅಲ್ಲಿ 1,16,221 ಮಂದಿ ಇಲ್ಲಿವರೆಗೆ ಸಾವಿಗೀಡಾದರೆ, 12,96,248 ಸೋಂಕು ಪ್ರಕರಣಗಳು ದಾಖಲಾಗಿವೆ.
ಅಮೆರಿಕ: 50,000 ದಾಟಿದ ಸಾವು
ವಾಶಿಂಗ್ಟನ್, ಎ. 24: ಅಮೆರಿಕದಲ್ಲಿ ಕೋವಿಡ್-19ನಿಂದಾಗಿ ಮೃತಪಟ್ಟವರ ಒಟ್ಟು ಸಂಖ್ಯೆ ಗುರುವಾರ 50,000ವನ್ನು ದಾಟಿದೆ ಹಾಗೂ ಒಂದೇ ದಿನದಲ್ಲಿ 3,176 ಮಂದಿ ಸಾವಿಗೀಡಾಗಿದ್ದಾರೆ ಎಂದು ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾನಿಲಯದ ಅಂಕಿಅಂಶಗಳು ತಿಳಿಸಿವೆ.
ಈವರೆಗೆ ಅಮೆರಿಕದಲ್ಲಿ 50,243 ಮಂದಿ ಸಾವಿಗೀಡಾಗಿದ್ದಾರೆ. ಜಗತ್ತಿನಲ್ಲೇ ಅತಿ ಹೆಚ್ಚಿನ ಹೊಡೆತಕ್ಕೆ ಸಿಲುಕಿರುವ ಅಮೆರಿಕದಲ್ಲಿ ಈವರೆಗೆ ಒಟ್ಟು 8,86,709 ಸೋಂಕು ಪ್ರಕರಣಗಳು ವರದಿಯಾಗಿವೆ.
ಪರೀಕ್ಷೆಯ ಕೊರತೆಯಿಂದಾಗಿ, ನೈಜ ಸೋಂಕಿತರ ಸಂಖ್ಯೆ ತುಂಬಾ ಹೆಚ್ಚಾಗಿರುವ ಸಾಧ್ಯತೆ ಇದೆ. ಕಳೆದ ವಾರ ಸತತ ಎರಡು ದಿನ ಅತಿ ಹೆಚ್ಚು ಸಂಖ್ಯೆಯ ಸಾವುಗಳು ವರದಿಯಾದವು. ಗುರುವಾರ 4,591 ಸಾವುಗಳು ವರದಿಯಾದರೆ, ಶುಕ್ರವಾರ 3,856 ಸಾವುಗಳು ದಾಖಲಾಗಿವೆ.







