ಕೊರೋನ ವೈರಸ್ ವಿರುದ್ಧದ ಹೋರಾಟದಲ್ಲಿ ‘ಹರ್ಡ್ ಇಮ್ಯುನಿಟಿ’ ಎಂಬ ದಾರಿ…!

ಪ್ರಪಂಚಾದಾದ್ಯಂತ ಕೋವಿಡ್-19 ಮಹಾಮಾರಿಯು ಸಾವಿರಾರು ಜನರನ್ನು ಬಲಿ ತೆಗೆದುಕೊಳ್ಳುತ್ತಿದೆ. ಹಲವು ದೇಶಗಳಲ್ಲಿ ವಿವಿಧ ಲಸಿಕೆಗಳಿಗಾಗಿ ಸಂಶೋಧನೆಗಳು ನಡೆಯುತ್ತಿದ್ದರೂ ಪರಿಣಾಮಕಾರಿಯಾಗಿ ಯಾವುದೇ ಔಷಧ ಕಂಡುಹಿಡಿಯಲು ಇದುವರೆಗೂ ಸಾಧ್ಯವಾಗಿಲ್ಲ. ಈಗಾಗಲೇ ಕೊರೋನ ತಡೆಗಟ್ಟಲು ಸುರಕ್ಷಿತ ಅಂತರ, ಲಾಕ್ ಡೌನ್, ಕೈಗಳನ್ನು ತೊಳೆದುಕೊಳ್ಳುವುದು ಹೀಗೆ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದರೂ ಇದ್ಯಾವುದೂ ದೀರ್ಘಕಾಲಿಕ ಪರಿಹಾರಗಳಲ್ಲ. ಅದರಲ್ಲೂ ಮುಂದುವರಿಯುತ್ತಿರುವ ದೇಶವಾದಂತಹ ಭಾರತದಲ್ಲಿ ಲಾಕ್ ಡೌನ್ ಗಂಭೀರ ಪರಿಣಾಮಗಳನ್ನು ಬೀರಲಿದೆ.
ಈಗಾಗಲೇ ಲಾಕ್ ಡೌನ್ ನಿಂದ ಭಾರತದ ಆರ್ಥಿಕತೆಗೆ ಭಾರೀ ಹೊಡೆತ ಬಿದ್ದಿದೆ. ಕೋವಿಡ್ 19 ವಿರುದ್ಧದ ಹೋರಾಟದಲ್ಲಿ ಲಾಕ್ ಡೌನ್ ಅತ್ಯಂತ ಪ್ರಮುಖವಾಗಿದ್ದರೂ ಅದನ್ನು ಹಲವು ದಿನಗಳ ಕಾಲ ಮುಂದುವರಿಸಲು ಸಾಧ್ಯವಿಲ್ಲ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿದೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ವಿಜ್ಞಾನಿಗಳು, ತಜ್ಞ ವೈದ್ಯರು ‘ಹರ್ಡ್ ಇಮ್ಯುನಿಟಿ’ ಎನ್ನುವ ತಂತ್ರವೊಂದನ್ನು ಜಗತ್ತಿನ ಮುಂದಿಟ್ಟಿದ್ದಾರೆ.
ಏನಿದು ಹರ್ಡ್ ಇಮ್ಯುನಿಟಿ ?
ಇಮ್ಯುನಿಟಿ ಅಥವಾ ದೇಹದ ನಿರೋಧಕ ಶಕ್ತಿ ಎಂದರೆ ಒಬ್ಬ ವ್ಯಕ್ತಿಯು ಯಾವುದಾದರೂ ಕಾಯಿಲೆಯನ್ನು ಉಂಟು ಮಾಡುವ ವೈರಸ್ ಗಳೊಂದಿಗೆ ಸಂಪರ್ಕ ಹೊಂದಿದಾಗ ನಮ್ಮ ದೇಹದಲ್ಲಿ ನೈಸರ್ಗಿಕವಾಗಿ ಇರುವ ನಿರೋಧಕ ಶಕ್ತಿಯು ನಮಗೆ ರಕ್ಷಣೆ ನೀಡುವುದು. ನಮ್ಮ ದೇಹ ಪ್ರವೇಶಿಸಿದ ರೋಗಾಣುವಿನ ವಿರುದ್ಧ ನಮ್ಮ ದೇಹದಲ್ಲೇ ಉತ್ಪತ್ತಿಯಾಗುವ ಪ್ರತಿಕಾಯಗಳು (ಆ್ಯಂಟಿಬಾಡೀಸ್) ಮೂಲಕ ನಾವು ನಿರೋಧಕ ಶಕ್ತಿ ಅಥವಾ ಇಮ್ಯುನಿಟಿಯನ್ನು ಪಡೆಯುತ್ತೇವೆ.
ಇಮ್ಯುನಿಟಿಯನ್ನು ಪಡೆಯುವುದಾದರೂ ಹೇಗೆ?
ಒಬ್ಬ ವ್ಯಕ್ತಿಯು ದೇಹ ಪ್ರವೇಶಿಸಿದ ವೈರಸ್ ನ ಕಣದಿಂದಾಗಿ ರೋಗ ಲಕ್ಷಣಗಳನ್ನು ಹೊರಹಾಕಿದಾಗ ಅಥವಾ ಯಾವುದೇ ರೋಗಲಕ್ಷಣಗಳು ಕಾಣಿಸದೆ ಇರುವ ಸಮಯದಲ್ಲೂ ಕೂಡ ಶರೀರದಲ್ಲಿ ಈ ವೈರಾಣು ಪ್ರವೇಶಿಸಿದ ಕಾರಣದಿಂದಾಗಿ ಪ್ರತಿಕಾಯಗಳು ಉತ್ಪತ್ತಿಯಾಗುತ್ತವೆ. ಇದರಿಂದಾಗಿ ವ್ಯಕ್ತಿಯ ಪ್ರತಿರೋಧ ಶಕ್ತಿಯು ವೃದ್ಧಿಯಾಗಿ ವ್ಯಕ್ತಿಯು ಈ ರೋಗಾಣುವಿನಿಂದ ಸ್ವಾಭಾವಿಕವಾಗಿ ಪ್ರತಿರಕ್ಷಣೆಯನ್ನು ಪಡೆಯುತ್ತಾನೆ.
ಕೋವಿಡ್-19 ಹಾಗೂ ಹರ್ಡ್ ಇಮ್ಯುನಿಟಿ
ಸಾಂಕ್ರಾಮಿಕ ರೋಗಶಾಸ್ತçಜ್ಞರ ಪ್ರಕಾರ ಯಾವುದೇ ರೋಗಾಣು ಅಥವಾ ವೈರಾಣು ಒಂದು ಸಮುದಾಯದಲ್ಲಿ ದೊಡ್ಡ ಪ್ರಮಾಣದಲ್ಲಿ ಹರಡಿದಾಗ ಅಂತಹ ಸಮುದಾಯದಲ್ಲಿ ಪ್ರತಿರಕ್ಷಣಾ ಶಕ್ತಿಯು ಹೆಚ್ಚಿರುತ್ತದೆ. ಇದನ್ನು ಹರ್ಡ್ ಇಮ್ಯುನಿಟಿ ಎಂದು ಕರೆಯಲಾಗುತ್ತದೆ. ಹರ್ಡ್ ಇಮ್ಯುನಿಟಿಯಿಂದ ಕಾಯಿಲೆಯು ಹರಡುವುದನ್ನು ತಡೆಯಬಹುದಾಗಿದೆ. ಹರ್ಡ್ ಇಮ್ಯುನಿಟಿಯನ್ನು ಲಸಿಕೆಯ ರೂಪದಲ್ಲೂ ಪಡೆಯಬಹುದಾಗಿದೆ. ಆದರೆ ಹರ್ಡ್ ಇಮ್ಯುನಿಟಿಯನ್ನು ಪಡೆಯಲು ವೈರಾಣುವಿನಿಂದ ಸೋಂಕಿನಾದ ವ್ಯಕ್ತಿ ತನ್ನ ದೇಹದಲ್ಲಿರುವ ಪ್ರತಿರೋಧ ಶಕ್ತಿಯಿಂದಾಗಿ ಗುಣಮುಖನಾಗಬೇಕು. ಉದಾಹರಣೆಗೆ ಪೋಲಿಯೋ ಲಸಿಕೆಯ ವಿಚಾರವನ್ನು ಗಮನಿಸುವುದಾದರೆ ಭಾರತ ಸದ್ಯ ಪೊಲೀಯೋ ಮುಕ್ತವಾಗಿದ್ದು, ದೇಶದಲ್ಲಿ ಯಾವುದೇ ಪೊಲೀಯೊ ಪ್ರಕರಣಗಳು ದಾಖಲಾಗಿಲ್ಲ. ಇದು ಸಾಧ್ಯವಾಗಿದ್ದು ಹೇಗೆ?, ಲಸಿಕೆಗಳನ್ನು ನಿರಂತರವಾಗಿ ನೀಡುತ್ತಾ ಬಂದಾಗ ಒಂದು ವೇಳೆ ಒಬ್ಬ ವ್ಯಕ್ತಿಯ ಮೇಲೆ ಪೊಲಿಯೊ ವೈರಸ್ ದಾಳಿ ಮಾಡಿದಾಗ ಪ್ರತಿರೋಧ ಶಕ್ತಿಯನ್ನು ಅದರ ವಿರುದ್ಧ ಹೋರಾಡಿ ವೈರಸನ್ನು ಕೊಲ್ಲುತ್ತದೆ. ಹೀಗೆ ಬಹುಸಂಖ್ಯೆಯಲ್ಲಿ ಎಲ್ಲರೂ ಪ್ರತಿರೋಧ ಶಕ್ತಿಯನ್ನು ಹೊಂದಿದಾಗ ವೈರಸ್ ಹರಡುವಿಕೆಗೆ ಅವಕಾಶಗಳೇ ಇಲ್ಲದಾಗುತ್ತದೆ.
ಕೋವಿಡ್ 19 ವಿಚಾರದಲ್ಲಿ ಹೇಳುವುದದಾದರೆ ಇದುವರೆಗೆ ನಡೆದ ಎಲ್ಲಾ ಸಂಶೋಧನೆಗಳ ಪ್ರಕಾರ ಕೊರೋನ ವೈರಸ್ ಯುವಜನತೆಗೆ ತೊಂದರೆ ಉಂಟು ಮಾಡುವ ಪ್ರಮಾಣ ಕಡಿಮೆ. ಯುವಜನತೆಯಲ್ಲಿ ಪ್ರತಿರೋಧ ಶಕ್ತಿಯು ಕೊರೋನ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊಂದಿದೆ. ಆದರೆ ಹಿರಿಯ ವ್ಯಕ್ತಿಗಳಲ್ಲಿ ಈ ಸಾಮರ್ಥ್ಯ ಇರುವುದಿಲ್ಲ. ಲಾಕ್ ಡೌನ್ ಹಲವು ದಿನಗಳ ಕಾಲ ಮುಂದುವರಿಸಲು ಸಾಧ್ಯವಿಲ್ಲದ ಕಾರಣ ಹಿರಿಯ ವ್ಯಕ್ತಿಗಳನ್ನು ಎಲ್ಲಾ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಲಾಕ್ ಡೌನ್ ನಲ್ಲಿ ಇರಿಸಬೇಕು ಹಾಗು ಯುವಜನತೆಯನ್ನು ಲಾಕ್ ಡೌನ್ ನಿಂದ ಮುಕ್ತರಾಗಿಸಬೇಕು. ಆನಂತರ ಕೊರೋನ ವೈರಸ್ ಖಂಡಿತವಾಗಿಯೂ ಯುವಜನತೆಯ ಮೇಲೆ ದಾಳಿ ಮಾಡುತ್ತದೆ ಮತ್ತು ಅವರಲ್ಲಿರುವ ಪ್ರತಿರೋಧಕ ಶಕ್ತಿ ಈ ವೈರಸ್ ಅನ್ನು ಸೋಲಿಸುವ ಸಾಧ್ಯತೆಗಳಿವೆ. ಹಾಗಾಗಿ ಯುವಜನತೆ ಮತ್ತೊಮ್ಮೆ ಕೊರೋನ ವೈರಸ್ ದಾಳಿಗೊಳಗಾಗುವ ಸಾಧ್ಯತೆ ಇರುವುದಿಲ್ಲ. ಹೀಗೆ ಬಹುಸಂಖ್ಯೆಯಲ್ಲಿ ನಡೆದಾಗ ಕೊರೋನ ಹರಡುವಿಕೆಗೆ ಯಾವುದೇ ಅವಕಾಶಗಳು ಇರುವುದಿಲ್ಲ. ಹಾಗಾಗಿ ಹರ್ಡ್ ಇಮ್ಯುನಿಟಿಯೇ ಕೊರೋನ ವಿರುದ್ಧದ ಹೋರಾಟಕ್ಕಿರುವ ಸದ್ಯದ ಏಕೈಕ ದಾರಿ ಎಂದು ವಿಜ್ಞಾನಿಗಳು ಅಭಿಪ್ರಾಯಿಸಿದ್ದಾರೆ.
ಆದರೆ ನಾವು ಹರ್ಡ್ ಇಮ್ಯುನಿಟಿ ಮೊರೆ ಹೋದಾಗ ಮಕ್ಕಳ, ಹಿರಿಯರ, ರೋಗಿಗಳ ಆರೈಕೆ ಅಗತ್ಯವಾಗಿರುತ್ತದೆ. ಈ ಸಮಯದಲ್ಲಿ ಹಿರಿಯ ವ್ಯಕ್ತಿಗಳನ್ನು, ಉಸಿರಾಟದ ತೊಂದರೆ ಇರುವವರನ್ನು, ಮಕ್ಕಳನ್ನು ಸುರಕ್ಷಿತವಾಗಿರಸಬೇಕು. ವೈರಸ್ ಯುವಜನತೆಯಲ್ಲಿ ಹರಡಿ ಅವರ ಮೂಲಕ, ಅವರ ದೇಹದಲ್ಲೇ ನಿರ್ಮೂಲನೆಯಾದಾಗ ಮತ್ತೊಮ್ಮೆ ವೈರಸ್ ಹರಡಲು ಯಾವುದೇ ಅವಕಾಶಗಳು ಇರುವುದಿಲ್ಲ ಎನ್ನುವುದು ತಜ್ಞರ ಅಭಿಮತ.








