ವಲಸೆ, ಕೂಲಿ ಕಾರ್ಮಿಕರ ಸ್ಥಳಾಂತರಕ್ಕೆ ಅವಕಾಶ: ಜಿಲ್ಲಾಧಿಕಾರಿಗಳಿಗೆ ಸರಕಾರದ ಮುಖ್ಯ ಕಾರ್ಯದರ್ಶಿ ಪತ್ರ

ಟಿ.ಎಂ.ವಿಜಯ್ ಭಾಸ್ಕರ್
ಬೆಂಗಳೂರು, ಎ.24: ಪ್ರಸ್ತುತ ಜಾರಿಯಲ್ಲಿರುವ ಲಾಕ್ಡೌನ್ ಪರಿಸ್ಥಿತಿಯಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಿಕ್ಕಿ ಹಾಕಿಕೊಂಡಿರುವಂತಹ ವಲಸೆ ಕಾರ್ಮಿಕರು ಹಾಗೂ ಕೂಲಿ ಕಾರ್ಮಿಕರು ಕೃಷಿ ಕೆಲಸಕ್ಕಾಗಿ ತಮ್ಮ ಗ್ರಾಮಗಳಿಗೆ ಹಿಂತಿರುಗಲು ಅಥವಾ ನಿರ್ಮಾಣ ಮತ್ತು ಇತರೆ ಕೆಲಸಗಳಿಗಾಗಿ ನಗರಗಳಿಗೆ ಹೋಗಲು ಬಯಸುತ್ತಿದ್ದಾರೆ ಎಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್ ಭಾಸ್ಕರ್ ತಿಳಿಸಿದ್ದಾರೆ.
ಈ ಸಂಬಂಧ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿರುವ ಅವರು, ಭಾರತ ಸರಕಾರದ ಗೃಹ ಮಂತ್ರಾಲಯವು ಎ.19ರಂದು ಜಾರಿ ಮಾಡಿರುವಂತಹ ಆದೇಶದನ್ವಯ ಈ ವಲಸೆ ಕಾರ್ಮಿಕರನ್ನು ಹಾಗೂ ಕೂಲಿ ಕಾರ್ಮಿಕರನ್ನು ರಾಜ್ಯದೊಳಗೆ ಸ್ಥಳಾಂತರಿಸಲು ಅನುಮತಿ ನೀಡಲಾಗಿದೆ. ಇದರಿಂದಾಗಿ ರಾಜ್ಯದಲ್ಲಿ ಸಾಮಾನ್ಯ ಕೃಷಿ ಮತ್ತು ಆರ್ಥಿಕ ಚಟುವಟಿಕೆಗಳು ಪುನರಾರಂಭಗೊಳ್ಳುತ್ತವೆ ಎಂದು ಹೇಳಿದ್ದಾರೆ.
ಆದುದರಿಂದ, ಎ.19ರ ಆದೇಶದ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಟೋಕಾಲ್ನಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ. ಕೆಎಸ್ಸಾರ್ಟಿಸಿ ಬಸ್ಸುಗಳನ್ನು ಉಪಯೋಗಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು, ಈ ಬಸ್ಸುಗಳಲ್ಲಿ ಶೇ.40ರಷ್ಟು ಮಾತ್ರ ಭರ್ತಿ ಮಾಡುವಂತೆ ನೋಡಿಕೊಳ್ಳಬೇಕು ಎಂದು ಮುಖ್ಯ ಕಾರ್ಯದರ್ಶಿ ಸೂಚಿಸಿದ್ದಾರೆ.
ಸ್ಥಳಾಂತರಿಸುವ ವಲಸೆ ಕಾರ್ಮಿಕರು ಮತ್ತು ಕೂಲಿ ಕಾರ್ಮಿಕರಿಗೆ ಕಡ್ಡಾಯವಾಗಿ ಮಾಸ್ಕ್ಗಳನ್ನು ಹಾಗೂ ಗ್ಲೌಸ್ಗಳನ್ನು ನೀಡಬೇಕು. ಈ ಸ್ಥಳಾಂತರಿಸುವ ಪ್ರಕ್ರಿಯೆಯನ್ನು ಕೂಡಲೆ ಪ್ರಾರಂಭಿಸುವಂತೆ ವಿಜಯ್ ಭಾಸ್ಕರ್ ಪತ್ರದಲ್ಲಿ ತಿಳಿಸಿದ್ದಾರೆ.







