ಶುಕ್ರವಾರ 1,752 ಹೊಸ ಪ್ರಕರಣ ದಾಖಲು: ಕೊರೋನ ಸೋಂಕಿತರ ಸಂಖ್ಯೆ 23,452ಕ್ಕೆ ಏರಿಕೆ

ಹೊಸದಿಲ್ಲಿ, ಎ.24: ಶುಕ್ರವಾರ ಒಂದೇ ದಿನ 1,752 ಹೊಸ ಸೋಂಕು ಪ್ರಕರಣ ದಾಖಲಾಗುವುದರೊಂದಿಗೆ ದೇಶದಲ್ಲಿ ಕೊರೋನ ಸೋಂಕಿತರ ಸಂಖ್ಯೆ 23,452ಕ್ಕೇರಿದೆ. ಕಳೆದ 24 ಗಂಟೆಯಲ್ಲಿ ಮತ್ತೆ 37 ಜನ ಮೃತರಾಗಿದ್ದು ದೇಶದಲ್ಲಿ ಕೊರೋನ ಸೋಂಕಿಗೆ ಬಲಿಯಾದವರ ಒಟ್ಟು ಸಂಖ್ಯೆ 723ಕ್ಕೇರಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಜೊತೆಗೆ, ಕೊರೋನ ಸೋಂಕಿನಿಂದ ಗುಣಮುಖರಾದವರ ಸಂಖ್ಯೆಯೂ ಹೆಚ್ಚಿದ್ದು, ಇದುವರೆಗೆ 4,748 ಜನ ಗುಣಮುಖರಾಗಿದ್ದಾರೆ. ಸಕ್ರಿಯ ಪ್ರಕರಣಗಳಲ್ಲಿ ಗುಣಮುಖರಾದವರ ಪ್ರಮಾಣ 20.57% ಆಗಿದ್ದು ಇದು ಕೂಡಾ ಅತ್ಯಧಿಕವಾಗಿದೆ ಎಂದು ಇಲಾಖೆ ತಿಳಿಸಿದೆ. ಕಳೆದ 14 ದಿನಗಳಲ್ಲಿ ದೇಶದ 80 ಜಿಲ್ಲೆಗಳಲ್ಲಿ ಕೊರೋನ ಸೋಂಕಿನ ಹೊಸ ಪ್ರಕರಣ ದಾಖಲಾಗಿಲ್ಲ. ಜನತೆ ಮತ್ತು ಆಡಳಿತದ ಸಾಮೂಹಿಕ ಪ್ರಯತ್ನದಿಂದಾಗಿ ಪ್ರಸರಣ ಸರಪಳಿಯನ್ನು ತುಂಡರಿಸಲಾಗಿದೆ. ಹಸಿರು ವಲಯದಲ್ಲಿರುವ ಜಿಲ್ಲೆಗಳಲ್ಲಿ ಹೊಸ ಪ್ರಕರಣ ದಾಖಲಾಗದಂತೆ ಮತ್ತು ಇನ್ನಷ್ಟು ಜಿಲ್ಲೆಗಳನ್ನು ಹಸಿರು ವಲಯಕ್ಕೆ ಸೇರ್ಪಡೆಗೊಳಿಸಲು ಪ್ರಯತ್ನ ಮುಂದುವರಿದಿದೆ ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿ ಲವ ಅಗರ್‌ವಾಲ್ ಹೇಳಿದ್ದಾರೆ.
ಲಾಕ್‌ಡೌನ್ ಜಾರಿಯ ಮುನ್ನ ದೇಶದಲ್ಲಿ ಕೊರೋನ ಸೋಂಕು ಪ್ರಸರಣ 3.4 ದಿನದಲ್ಲಿ ದ್ವಿಗುಣವಾಗುತ್ತಿದ್ದರೆ, ಲಾಕ್‌ಡೌನ್‌ನ ಬಳಿಕ ಇದು 7.5 ದಿನಕ್ಕೆ ತಲುಪಿದೆ ಎಂದು ಸರಕಾರ ತಿಳಿಸಿದೆ. ಕೊರೋನ ಸೋಂಕು ಪ್ರಸರಣ ದ್ವಿಗುಣವಾಗದಂತೆ ತಡೆಯಲು ಮತ್ತು ಜನರ ಪ್ರಾಣ ಉಳಿಸಲು ಲಾಕ್‌ಡೌನ್ ಸಹಕಾರಿಯಾಗಿದೆ. ಲಾಕ್‌ಡೌನ್ ನಿರ್ಧಾರ ಸಕಾಲಿಕವಾಗಿದ್ದರಿಂದ ದೇಶದಲ್ಲಿ ಈಗ ಸುಮಾರು 23,000 ಸೋಂಕು ಪ್ರಕರಣ ದಾಖಲಾಗಿದೆ. ಇಲ್ಲದಿದ್ದರೆ ಇದು 73,000ದ ಗಡಿ ದಾಟುತ್ತಿತ್ತು ಎಂದು ನೀತಿ ಆಯೋಗದ ಸದಸ್ಯ ಡ ವಿಕೆ ಪೌಲ್ ಹೇಳಿದ್ದಾರೆ.







