ಅಹ್ಮದಾಬಾದ್, ಸೂರತ್, ಹೈದರಾಬಾದ್, ಚೆನ್ನೈಗಳಲ್ಲಿ ಕೊರೋನ ಸೋಂಕು ಪರಿಸ್ಥಿತಿ ಗಂಭೀರ: ಕೇಂದ್ರ ಸರಕಾರ

ಹೊಸದಿಲ್ಲಿ, ಎ.24: ಅಹ್ಮದಾಬಾದ್, ಸೂರತ್, ಹೈದರಾಬಾದ್ ಮತ್ತು ಚೆನ್ನೈ ಸಹಿತ ಪ್ರಮುಖ ಹಾಟ್‌ಸ್ಪಾಟ್ ಪ್ರದೇಶಗಳಲ್ಲಿ ಕೊರೋನ ಸೋಂಕು ಪರಿಸ್ಥಿತಿ ಗಂಭೀರವಾಗಿದೆ ಎಂದು ಕೇಂದ್ರದ ಗೃಹ ಇಲಾಖೆ ಹೇಳಿದೆ.
ಗುಜರಾತ್‌ನ ಅಹ್ಮದಾಬಾದ್ ಮತ್ತು ಸೂರತ್, ಮಹಾರಾಷ್ಟ್ರದ ಥಾಣೆ, ತೆಲಂಗಾಣದ ಹೈದರಾಬಾದ್ ಮತ್ತು ತಮಿಳುನಾಡಿನ ಚೆನ್ನೈಯಂತಹ ಪ್ರಮುಖ ಮತ್ತು ಉದಯೋನ್ಮುಖ ಹಾಟ್‌ಸ್ಪಾಟ್ ಜಿಲ್ಲೆಗಳು ಅಥವಾ ಪ್ರದೇಶಗಳಲ್ಲಿ ಪರಿಸ್ಥಿತಿ ವಿಶೇಷವಾಗಿ ಗಂಭೀರವಾಗಿದೆ. ಹಾಟ್‌ಸ್ಪಾಟ್ ಜಿಲ್ಲೆಗಳಿಗೆ ಭೇಟಿ ನೀಡಿ ಕೊರೋನ ವಿರುದ್ಧದ ಕಾರ್ಯಾಚರಣೆಯನ್ನು ಪರಿಶೀಲಿಸಲು ಕೇಂದ್ರ ಸರಕಾರ ಈಗಾಗಲೇ 10 ಅಂತರ್‌ಸಚಿವಾಲಯ ಕೇಂದ್ರ ತಂಡಗಳನ್ನು ರಚಿಸಿದೆ.
ಇಂತಹ 5 ತಂಡಗಳು ಅಹ್ಮದಾಬಾದ್, ಸೂರತ್, ಥಾಣೆ, ಹೈದರಾಬಾದ್ ಮತ್ತು ಚೆನ್ನೈಯಲ್ಲಿ ಪರಿಶೀಲನೆ ನಡೆಸುತ್ತಿವೆ. ಕೇಂದ್ರದ ವೀಕ್ಷಕರ ತಂಡ ಮುನ್ನ ಮುಂಬೈ, ಪುಣೆ, ಇಂದೋರ್, ಜೈಪುರ, ಪಶ್ಚಿಮ ಬಂಗಾಳ ಮತ್ತು ನೆರೆಯ ಜಿಲ್ಲೆಗೆ ಭೇಟಿ ನೀಡಿದೆ. ಪರಿಸ್ಥಿತಿಯನ್ನು ಅವಲೋಕಿಸಿ, ರಾಜ್ಯದ ಅಧಿಕಾರಿಗಳಿಗೆ ಅಗತ್ಯದ ಸಲಹೆ ಸೂಚನೆಯನ್ನು ನೀಡುವುದರ ಜೊತೆಗೆ, ವಾಸ್ತವಿಕ ವರದಿಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸುತ್ತದೆ.
ಲಾಕ್‌ಡೌನ್ ನಿಯಮದ ಪಾಲನೆಗೆ ಸೂಚನೆ, ಆರೋಗ್ಯ ಕಾರ್ಯಕರ್ತರ ಸುರಕ್ಷತೆಗೆ ಕ್ರಮ, ಪರೀಕ್ಷೆ ನಡೆಸುವ ಕಿಟ್‌ಗಳು, ವೈಯಕ್ತಿಕ ರಕ್ಷಣಾ ಸಾಧನ, ಮಾಸ್ಕ್ ಹಾಗೂ ಇತರ ಸುರಕ್ಷಾ ಸಾಧನಗಳ ಲಭ್ಯತೆ, ಕಾರ್ಮಿಕರು ಹಾಗೂ ಬಡವರಿಗೆ ತೆರೆಯಲಾಗಿರುವ ಪರಿಹಾರ ಶಿಬಿರಗಳ ಸ್ಥಿತಿಗತಿಯ ಅಧ್ಯಯನ ನಡೆಸಿ ವರದಿ ಸಲ್ಲಿಸುತ್ತದೆ. ದೇಶದ ಕೆಲವು ಜಿಲ್ಲೆಗಳಲ್ಲಿ ಲಾಕ್‌ಡೌನ್ ನಿಯಮದ ಉಲ್ಲಂಘನೆ ಪ್ರಕರಣ ವರದಿಯಾಗಿದ್ದು ಇದು ಗಂಭೀರ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು ಎಂದು ಆರೋಗ್ಯ ಇಲಾಖೆ ಆತಂಕ ವ್ಯಕ್ತಪಡಿಸಿದೆ. ಆರೋಗ್ಯ ಕಾರ್ಯಕರ್ತರ ಮೇಲೆ ಹಲ್ಲೆ, ಪೊಲೀಸ್ ಸಿಬಂದಿಯ ಮೇಲೆ ಹಲ್ಲೆ, ಮಾರುಕಟ್ಟೆ ಪ್ರದೇಶಗಳಲ್ಲಿ ಸುರಕ್ಷಿತ ಅಂತರದ ನಿಯಮ ಉಲ್ಲಂಘನೆ, ಕ್ವಾರಂಟೈನ್ ಕೇಂದ್ರ ಸ್ಥಾಪನೆಗೆ ವಿರೋಧ ಮುಂತಾದ ರೀತಿಯಲ್ಲಿ ನಿಯಮವನ್ನು ಉಲ್ಲಂಘಿಸಲಾಗುತ್ತಿದೆ. ಇಂತಹ ಘಟನೆ ಮರುಕಳಿಸಿದರೆ ಹಾಟ್‌ಸ್ಪಾಟ್ ಜಿಲ್ಲೆಗಳಲ್ಲಿ ಜನರ ಆರೋಗ್ಯದ ಮೇಲೆ ಮಾರಕ ಮತ್ತು ಗಂಭೀರ ಪರಿಣಾಮ ಬೀರಬಹುದು ಎಂದು ಇಲಾಖೆ ತಿಳಿಸಿದೆ.







