ಮಂಗಳೂರಿಗೆ ತಂಪೆರೆದ ಮಳೆ

ಮಂಗಳೂರು, ಎ.25: ಕಳೆದ ಕೆಲವು ದಿನಗಳಿಂದ ಬಿಸಿಲ ಬೇಗೆಯಿಂದ ತತ್ತರಿಸಿರುವ ನಗರಕ್ಕೆ ಕಳೆದ ರಾತ್ರಿ ಮತ್ತು ಇಂದು ಮುಂಜಾನೆ ಸುರಿದ ಮಳೆ ತಂಪೆರೆದಿದೆ.
ಮಂಗಳೂರು ನಗರದ ಕೆಲವೆಡೆ ರಾತ್ರಿ 10 ಗಂಟೆ ಸುಮಾರಿಗೆ ಮಿಂಚು ಸಹಿತ ಸಾಧಾರಣ ಮಳೆಯಾಗಿದೆ. ಇದು ಮುಂದುವರಿದು ಇಂದು ಮುಂಜಾನೆಯು ನಗರ ಮತ್ತು ನಗರ ಹೊರವಲಯದ ಹಲವೆಡೆ ಧಾರಾಕಾರ ಮಳೆ ಸರಿದಿದೆ.
ಮುಂಜಾನೆ 3:30ರ ಸುಮಾರಿಗೆ ತೊಕ್ಕೊಟ್ಟು, ಪಂಡಿತ್‌ಹೌಸ್, ದೇರಳಕಟ್ಟೆ ಪರಿಸರದಲ್ಲಿ ಉತ್ತಮ ಮಳೆಯಾಗಿರುವುದು ವರದಿಯಾಗಿದೆ. ನಗರ ವ್ಯಾಪ್ತಿಯಲ್ಲಿ ನಿನ್ನೆ ಮುಸ್ಸಂಜೆಯಿಂದಲೇ ಮೋಡ ಕವಿದ ವಾತಾವರಣ ಕಂಡುಬಂದಿತ್ತು. ರಾತ್ರಿ 10 ಗಂಟೆಯ ವೇಳೆ ತುಂತುರು ಮಳೆ ಸುರಿಯಲಾರಂಭಿಸಿತ್ತು. ಬಳಿಕ ಭಾರೀ ಮಿಂಚು ಕಾಣಿಸಿಕೊಂಡರು ಮಳೆ ಇಳಿಮುಖವಾಗಿತ್ತು. ಮುಂಜಾನೆಯ ವೇಳೆ ಮತ್ತೆ ಸಾಧಾರಣ ಮಳೆಯಾಗಿದೆ.
ಕರಾವಳಿ ಭಾಗದ ಕೆಲವೆಡೆ ಸಾಧಾರಣ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಸೂಚನೆ ನೀಡಿರುವ ಬೆನ್ನಲ್ಲೇ ಮಳೆ ಆರಂಭಗೊಂಡಿದೆ.














