ಮಹೇಂದ್ರ ಕುಮಾರ್ ನಿಧನಕ್ಕೆ ಮುಖ್ಯಮಂತ್ರಿ ಸಹಿತ ಗಣ್ಯರ ಸಂತಾಪ

ಮಹೇಂದ್ರ ಕುಮಾರ್
ಬೆಂಗಳೂರು, ಎ.25: ಸಾಮಾಜಿಕ ಕಾರ್ಯಕರ್ತ, ಪ್ರಗತಿಪರ ಚಿಂತಕ, ವಾಗ್ಮಿ ಮಹೇಂದ್ರ ಕುಮಾರ್ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಹಿತ ಹಲವು ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ, ಪ್ರಗತಿಪರ ಚಿಂತಕ ಮಹೇಂದ್ರ ಕುಮಾರ್ ಅವರ ಅಗಲಿಕೆ ನೋವು ತಂದಿದೆ. ಬಜರಂಗದಳದ ಮಾಜಿ ಸಂಚಾಲಕರಾಗಿದ್ದ ಮಹೇಂದ್ರ ಕುಮಾರ್ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ಕುಟುಂಬ ಸದಸ್ಯರು ಹಾಗೂ ಹಿತೈಷಿಗಳಿಗೆ ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಂತಾಪ ಸೂಚಿಸಿದ್ದಾರೆ.
ಸಿದ್ದರಾಮಯ್ಯ:
‘‘ಸಾಮಾಜಿಕ ಹೋರಾಟಗಾರ ಮಹೇಂದ್ರಕುಮಾರ್ ಅವರ ಅನಿರೀಕ್ಷಿತ ಸಾವಿನಿಂದ ದುಃಖಿತನಾಗಿದ್ದೇನೆ. ಜಾತ್ಯತೀತ ಶಕ್ತಿಗಳನ್ನು ಸಂಘಟಿಸಲು ಅವಿರತವಾಗಿ ಶ್ರಮಿಸುತ್ತಿದ್ದ ಈ ಯುವ ನಾಯಕ ಒಂದೆರಡು ಭೇಟಿಗಳಲ್ಲಿಯೇ ನನ್ನಲ್ಲಿ ಭರವಸೆ ಮೂಡಿಸಿದ್ದರು. ಅವರ ದುಃಖತಪ್ತ ಕುಟುಂಬಕ್ಕೆ ನನ್ನ ಸಂತಾಪಗಳು’’ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಪ್ರಗತಿಪರ ಚಿಂತಕ ಮಹೇಂದ್ರ ಕುಮಾರ್ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ದಸಂಸ
ಮಾನವತಾವಾದಿ, ಜಾತ್ಯಾತೀತ ತತ್ವದ ಪ್ರತಿಪಾದಕ, ಅಂಬೇಡ್ಕರ್ ಚಿಂತನೆಯಯಲ್ಲಿ ದೇಶದ ಸರ್ವ ಧರ್ಮದ ಜನರನ್ನು ಒಗ್ಗೂಡಿಸಿ ಅಂಬೇಡ್ಕರ್ ಅವರ ಕನಸಿನ ಜಾತ್ಯತೀತ ರಾಷ್ಟ್ರವನ್ನು ಕಟ್ಟಲು ಪಣ ತೊಟ್ಟಿದ್ದ ನಮ್ಮೆಲ್ಲರ ನೆಚ್ಚಿನ ವಿಚಾರಧಾರೆಯ ನಾಯಕ ಮಹೇಂದ್ರಕುಮಾರ್ ಕೊಪ್ಪ ಅವರ ನಿಧನ ನಮ್ಮ ಹೋರಾಟದ ಸ್ಫೂರ್ತಿಗೆ ತುಂಬಲಾರದ ನಷ್ಟ.ಅವರ ಅಕಾಲಿಕ ಅಗಲುವಿಕೆಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ )ದ. ಕ. ಜಿಲ್ಲಾ ಸಮಿತಿಯು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಿದೆ. ಭಗವಾನ್ ಬುದ್ಹರು ಅವರಿಗೆ ಚಿರಶಾಂತಿಯನ್ನು ನೀಡಲಿ ಸಮಿತಿಯ ಜಿಲ್ಲಾ ಸಂಚಾಲಕ ರಘು. ಕೆ ಎಕ್ಕಾರ್ ಸಂತಾಪ ಸೂಚಿಸಿದ್ದಾರೆ.
ಎಸ್ ಡಿಪಿಐ
ರಾಜ್ಯದಲ್ಲಿ ಸಾಮಾಜಿಕ ನ್ಯಾಯ ಹಾಗೂ ಭ್ರಾತೃತ್ವದ ಧ್ವನಿ ಎಬ್ಬಿಸಿ ದಿಟ್ಟ ಮಾತುಗಳಿಂದ ಜನಪ್ರಿಯತೆ ಗಳಿಸಿ ಉದಯೋನ್ಮುಖ ಮುಂದಾಳು ಎನಿಸಿಕೊಂಡಿದ್ದ ಮಹೇಂದ್ರಕುಮಾರ್ ರವರ ನಿಧನ ದಿಗ್ಭ್ರಮೆ ಹುಟ್ಟಿಸಿದೆ. ಸಾಮಾಜಿಕ ನ್ಯಾಯ ಹಾಗೂ ಸೌಹಾರ್ದತೆಯ ಸಂಘಟಿತ ಹೋರಾಟದಲ್ಲಿದ್ದ ಒಬ್ಬ ಲವಲವಿಕೆಯ ನಾಯಕನನ್ನು ರಾಜ್ಯದ ಜನತೆ ಕಳೆದುಕೊಂಡಿದೆ ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್ ಡಿಪಿಐ) ಕರ್ನಾಟಕ ರಾಜ್ಯ ಅಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ವಿಷಾದ ವ್ಯಕ್ತಪಡಿಸಿದ್ದಾರೆ
ಮಹೇಂದ್ರ ಕುಮಾರ ಅವರ ಅಗಲಿಕೆ ರಾಜ್ಯದ ಜನತೆಗೆ ದೊಡ್ಡ ನಷ್ಟ ಎಂದವರು ಸಂತಾಪ ವ್ಯಕ್ತಪಡಿಸಿದ್ದಾರೆ.
ಜಮಾಅತೆ ಇಸ್ಲಾಮಿ ಹಿಂದ್
ಅಪ್ರತಿಮ ಹೋರಾಟಗಾರ, ಮಹೇಂದ್ರ ಕುಮಾರ್ ಕೊಪ್ಪ ಅವರ ನಿಧನವು ಅಪಾರ ನೋವು ತಂದಿದೆ. ಕಳೆದ ಕೆಲವು ವರ್ಷಗಳಿಂದ ತನ್ನನ್ನು ದೇಶದ, ಒಗ್ಗಟ್ಟು, ಶಾಂತಿ ಸೌಹಾರ್ದಕ್ಕಾಗಿ, ಮೀಸಲಿಟ್ಟು ದೇಶದ ಜನತೆಗೆ ಧೈರ್ಯ ತುಂಬುತ್ತಾ ಅದಕ್ಕಾಗಿ ತನ್ನನ್ನು ಅರ್ಪಿಸಿದ ಕೆಚ್ಚೆದೆಯ ತ್ಯಾಗಿಯ ವಿದಾಯ ದುಃಖ ಕ್ಕೀಡು ಮಾಡಿದೆ. ಅವರು ತೋರಿಸಿ ಕೊಟ್ಟ ವೈಚಾರಿಕತೆಯ ಹಾದಿ ನಮಗೆ ಮಾರ್ಗದರ್ಶನವಾಗಲಿ. ಅವರು ಪ್ರತಿಪಾದಿಸಿದ ಸೌಹಾರ್ದ ಮತ್ತು ಸಹಿಷ್ಣುತೆ ಮುಂದುವರಿಯಲಿ ಎಂದು ಜಮಾಅತೆ ಇಸ್ಲಾಮಿ ಹಿಂದ್ ದ.ಕ. ಜಿಲ್ಲಾ ಸಂಚಾಲಕ ಎ.ಸಯೀದ್ ಇಸ್ಮಾಯೀಲ್ ಸಂತಾಪ ಸೂಚಿಸಿದ್ದಾರೆ.
ಮುಸ್ಲಿಮ್ ಒಕ್ಕೂಟ
ಮಹೇಂದ್ರ ಕುಮಾರ್ ಕೊಪ್ಪ ಅವರ ಅಕಾಲಿಕ ಮರಣದಿಂದ ನವ ಚಿಂತನಾ ವರ್ಗಕ್ಕೆ ತುಂಬಲಾರದ ನಷ್ಟವಾಗಿದೆ. ಪೌರತ್ವ ಸಂರಕ್ಷಣಾ ಹೋರಾಟದಲ್ಲಿ ತನ್ನನ್ನು ಕೆಳ ಮತ್ತು ಶೋಷಿತ ವರ್ಗದವರೊಂದಿಗೆ ತೊಡಗಿಸಿಕೊಂಡು, ಕರಾವಳಿ ಜಿಲ್ಲೆಗಳಲ್ಲಿ ಜಾಗೃತಿ ಅಭಿಯಾನವನ್ನು ಯಶಸ್ವಿಗೊಳಿಸಲು ಅವರು ಬಹು ಮುಖ್ಯ ಪಾತ್ರ ವಹಿಸಿದ್ದರು. ಅವರ ಸ್ವಾಮಿ ವಿವೇಕಾನಂದರ ನೈಜ ಚಿಂತನೆಯನ್ನು ಅಳವಡಿಸಿ ಸಾಮಾಜಿಕ ಕ್ರಾಂತಿಗೆ ಮುಂದಾಗಿ ನಮ್ಮ ದ್ವನಿ ಸಾಮಾಜಿಕ ಜಾಲತಾಣ ಮೂಲಕ ಸಮಾಜವನ್ನು ಜಾಗೃತಗೊಳಿಸುವ ಅವರ ಪ್ರಯತ್ನ ಶ್ಲಾಘನೀಯ. ಅವರ ನಿಧನಕ್ಕೆ ದ.ಕ. ಜಿಲ್ಲಾ ಮುಸ್ಲಿಮ್ ಒಕ್ಕೂಟ ತೀವ್ರ ಸಂತಾಪ ವ್ಯಕ್ತಡಿಸುತ್ತದೆ ಎಂದು ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್ ತಿಳಿಸಿದ್ದಾರೆ.
ಯುನಿವೆಫ್ ಕರ್ನಾಟಕ
ಸೌಹಾರ್ದ ಸಮಾಜದ ಸ್ಥಾಪನೆಗಾಗಿ ಹೋರಾಟ ನಡೆಸುವಲ್ಲಿ ಮುಂಚೂಣಿಯಲ್ಲಿದ್ದ ಖ್ಯಾತ ವಾಗ್ಮಿ ಮಹೇಂದ್ರ ಕುಮಾರ್ ರ ನಿಧನಕ್ಕೆ ಯುನಿವೆಫ್ ಕರ್ನಾಟಕ ತೀವ್ರ ಸಂತಾಪ ವ್ಯಕ್ತಪಡಿಸಿದೆ.
ಸಂಘಪರಿವಾರದ ಕೊಂಡಿಯನ್ನು ಕಳಚಿ ಸಮಾಜಮುಖಿ ಕೆಲಸಗಳಿಗೆ ತನ್ನನ್ನು ಅರ್ಪಿಸಿ ಎಲ್ಲ ವಿಧದ ಸಾಮಾಜಿಕ ಕಟ್ಟಳೆಗಳನ್ನು ವಿರೋಧಿಸಿ ಹೊಸ ಸಮಾಜ ಕಟ್ಟುವಲ್ಲಿ ತನ್ನನ್ನು ಸಮರ್ಪಿಸಿ ಈಗ ಅಕಾಲಿಕವಾಗಿ ಮರಣ ಹೊಂದಿರುವುದು ಕರ್ನಾಟಕಕ್ಕೆ ದೊಡ್ಡ ನಷ್ಟ.
ಒಂದು ವರ್ಷ ಮೊದಲು ಯುನಿವೆಫ್ ಕರ್ನಾಟಕದ 'ಪ್ರವಾದಿ ಅಭಿಯಾನದ' ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಸಾಮಾಜಿಕ ಬದಲಾವಣೆಯಲ್ಲಿ ಯುವಕರ ಪಾತ್ರಗಳ ಬಗ್ಗೆ ಬಹಳ ಮನೋಜ್ಞವಾಗಿ ವಿವರಿಸಿದ್ದ ಅವರು ಸೇರಿದ ಸಾವಿರಾರು ಜನರಲ್ಲಿ ಆಶಾಕಿರಣ ಮೂಡಿಸಿದ್ದರು. ಅವರ ಅಗಲುವಿಕೆಯಿಂದ ಆಧುನಿಕ ಸಮಾಜ ಅಮೂಲ್ಯ ವಸ್ತುವೊಂದನ್ನು ಕಳೆದುಕೊಂಡ ಹಾಗೆ ಭಾಸವಾಗುತ್ತಿದೆ ಎಂದು ಸಂತಾಪ ಸೂಚಿಸಿದೆ.
ಪ್ರಗತಿಪರ ಚಿಂತಕ ಮಹೇಂದ್ರ ಕುಮಾರ್ ಅವರ ಅಗಲಿಕೆ ನೋವು ತಂದಿದೆ.
— B.S. Yediyurappa (@BSYBJP) April 25, 2020
ಬಜರಂಗದಳದ ಮಾಜಿ ಸಂಚಾಲಕರಾಗಿದ್ದ ಮಹೇಂದ್ರ ಕುಮಾರ್ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ಕುಟುಂಬ ಸದಸ್ಯರು ಹಾಗೂ ಹಿತೈಷಿಗಳಿಗೆ ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ.
ಸಾಮಾಜಿಕ ಹೋರಾಟಗಾರ ಮಹೇಂದ್ರಕುಮಾರ್ ಅವರ ಅನಿರೀಕ್ಷಿತ ಸಾವಿನಿಂದ ದು:ಖಿತನಾಗಿದ್ದೇನೆ.
— Siddaramaiah (@siddaramaiah) April 25, 2020
ಜಾತ್ಯತೀತ ಶಕ್ತಿಗಳನ್ನು ಸಂಘಟಿಸಲು ಅವಿರತವಾಗಿ ಶ್ರಮಿಸುತ್ತಿದ್ದ ಈ ಯುವ ನಾಯಕ ಒಂದೆರಡು ಭೇಟಿಗಳಲ್ಲಿಯೇ ನನ್ನಲ್ಲಿ ಭರವಸೆ ಮೂಡಿಸಿದ್ದರು.
ಅವರ ದು:ಖತಪ್ತ ಕುಟುಂಬಕ್ಕೆ ನನ್ನ ಸಂತಾಪಗಳು. pic.twitter.com/wcmKL4rdag







