ಲಾಕ್‌ಡೌನ್‌ನಿಂದ ಸಿಗದ ಮದ್ಯ: ಆರೋಗ್ಯವೂ ಸುಧಾರಣೆ, ಕುಟುಂಬದಲ್ಲೂ ನೆಮ್ಮದಿ!

ಬೆಂಗಳೂರು: ಕೊರೋನ ವೈರಸ್ ಭೀತಿಯಲ್ಲೇ ಜನರು ಬದುಕು ಸಾಗಿಸುತ್ತಿದ್ದಾರೆ. ಇದರ ಮಧ್ಯೆಯೇ ಮದ್ಯವ್ಯಸನಿಗಳ ಬದುಕು ಹಸನಾಗಿದೆ. ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳು ಬಂದ್ ಆಗಿರುವುದರಿಂದ ನಿತ್ಯ ಮದ್ಯ ಸೇವಿಸುತ್ತಿದ್ದ ಕೆಲವರು ಇದೀಗ ಕುಟುಂಬದವರ ಜೊತೆಗೂಡಿ ಸಂತೋಷವಾಗಿದ್ದಾರೆ. ಹಲವು ಬಾರಿ ಮನವಿ ಮಾಡಿದರೂ ಮದ್ಯದ ಚಟ ಬಿಡದವರು, ಕೊರೋನದಿಂದಾಗಿ ಕುಡಿತ ಬಿಟ್ಟಿದ್ದಾರೆ. ಇದರಿಂದಾಗಿ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಲ್ಲಿನ ಮಹಿಳೆಯರ ಮೊಗದಲ್ಲಿ ಮಂದಹಾಸ ಮೂಡಿದೆ.
ರಾಜ್ಯಾದ್ಯಂತ ಕೊರೋನ ಲಾಕ್‌ಡೌನ್ ನಡುವೆಯೂ ಹಲವಾರು ಜನರು ನೆಮ್ಮದಿಯ ಜೀವನ ನಡೆಸುವಂತಾಗಿದೆ. ಮದ್ಯವ್ಯಸನಿಗಳಾಗಿದ್ದ ಅಣ್ಣ-ತಮ್ಮ, ಗಂಡ, ಇಂದು ಇರುವಂತೆ ಕೊನೆಯತನಕವೂ ಆರೋಗ್ಯವಾಗಿ ಇರಬೇಕು ಎಂಬುದು ಬಹುತೇಕ ಮಹಿಳೆಯರ ಆಶಯವಾಗಿದೆ. ನಿತ್ಯ ಕುಡಿದು, ತೂರಾಡಿಕೊಂಡು ಬರುತ್ತಿದ್ದ ನಮ್ಮ ಯಜಮಾನರು ಮದ್ಯವಿಲ್ಲದೆ, ಮನೆಯಲ್ಲಿಯೇ ಮೂರು ಹೊತ್ತು ಊಟ ಮಾಡಿಕೊಂಡು ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯವಾಗಿದ್ದಾರೆ.
ನನಗೆ ಈಗ 42 ವರ್ಷ. ಆಟೊ ಚಾಲನೆ ವೃತ್ತಿ ಆರಂಭಿಸಿ, 22 ವರ್ಷಗಳೇ ಕಳೆದವು. ನಿತ್ಯವೂ ಮದ್ಯ ಸೇವಿಸಿಯೇ ಮನೆಗೆ ಬರುತ್ತಿದ್ದೆ. ಊಟವನ್ನೂ ಮಾಡದೆ ಮಲಗುತ್ತಿದ್ದೆ. ರಾತ್ರಿ ವೇಳೆ ಮನೆಯಲ್ಲೂ ಗಲಾಟೆ ಬೇರೆ! ನೆಮ್ಮದಿ ಇರಲಿಲ್ಲ. ಹಗಲಿಡೀ ಮೈಕೈ ನೋವು ಮಾಡಿಕೊಂಡು ದುಡಿದ ದುಡ್ಡು ಕುಡಿತದ ಚಟಕ್ಕೆ ವ್ಯಯವಾಗುತ್ತಿತ್ತು. ಮಕ್ಕಳ ಶಾಲಾ ಶುಲ್ಕ ಪಾವತಿಗೂ ಹಣ ಇರುತ್ತಿರಲಿಲ್ಲ. ಆದರೆ, ತಿಂಗಳಿಂದ ಮದ್ಯ ಸಿಗದ ಕಾರಣ ಮದ್ಯ ಕುಡಿಯುವುದನ್ನೇ ತ್ಯಜಿಸಿದ್ದೇನೆ. ಇನ್ಮುಂದೆ ಮದ್ಯ ತ್ಯಜಿಸಲು ನಿರ್ಧರಿಸಿರುವೆ.. ಎಂಬುವುದು ಆಟೋ ಚಾಲಕ ಶ್ರೀರಾಮಪ್ಪ ಅವರ ಅಭಿಪ್ರಾಯವಾಗಿದೆ.
ಲಾಕ್‌ಡೌನ್ ನಮಗೆ ಒಳ್ಳೆಯದನ್ನೇ ಮಾಡಿದೆ. ಇದರಿಂದ ನಮ್ಮ ಕುಟುಂಬಗಳಲ್ಲಿ ನಗು ಮೂಡಿದೆ. ಈ ಕೊರೋನ ಮದ್ಯವ್ಯಸನಿಗಳಿಗೆ ಸರಿಯಾದ ಬುದ್ಧಿ ಕಲಿಸಿದೆ. ಬಡತನದಲ್ಲಿಯೂ ನೆಮ್ಮದಿಯ ಜೀವನ ನಡೆಸುತ್ತಿದ್ದೇವೆ ಎಂದರೆ ಮದ್ಯ ಸಿಗದೇ ಇರುವಂತಹ ಲಾಕ್‌ಡೌನ್ ಕಾರಣ. ನಮ್ಮ ಏರಿಯಾದಲ್ಲಿ ಹಲವು ಪುರುಷರು ಮದ್ಯ ಸೇವನೆ ಬಿಟ್ಟಿದ್ದಾರೆ. ಬಾರ್‌ಗಳು ಬಂದ್ ಆಗಿರುವುದರಿಂದ ಒಳ್ಳೆಯದಾಗಿದೆ ಎಂದು ಮದ್ಯವ್ಯಸನಿ ಹನುಮಂತಪ್ಪ ಅವರ ಪತ್ನಿ ನೀಲಮ್ಮ ಹೇಳಿದರು.
ಇಡೀ ದಿನ ತೋಟದಲ್ಲಿ ಕೂಲಿ ಕೆಲಸ ಮಾಡುತ್ತಿದ್ದೆವು. ಮೈಕೈ ನೋವು ಮರೆಯಲೆಂದು ಪೋಷಕರು ಮದ್ಯ ಸೇವಿಸುತ್ತಿದ್ದರು. ಮನೆಗೆ ನಿತ್ಯವೂ ಮದ್ಯತಂದು ಸೇವನೆ ಮಾಡುತ್ತಿದ್ದುದರ ಪರಿಣಾಮ, ಚಿಕ್ಕ ವಯಸ್ಸಿನಲ್ಲೇ ನನಗೂ ಮದ್ಯ ಸೇವನೆಯ ಆಸೆ ಬಂತು. ಆರಂಭದಲ್ಲಿ ಸುಮ್ಮನೆ ಕುಡಿತಕ್ಕೆ ಇಳಿದೆ. ಕೊನೆಯಲ್ಲಿ ಅದು ಅಭ್ಯಾಸವಾಗಿ ಹೋಯಿತು. ಯಾರಲ್ಲೂ ದುಡ್ಡಿಲ್ಲದ ಸ್ಥಿತಿ ನಿರ್ಮಾಣವಾಗಿತ್ತು. ಆದರೆ, ಒಂದು ತಿಂಗಳಿಂದ ಮದ್ಯ ಸಿಕ್ಕಿಲ್ಲ. ಕುಟುಂಬದಲ್ಲಿ ಸಂತಸ ಕಾಣುತ್ತಿದೆ ಎಂದು ಕಾರ್ಮಿಕ ರಂಜಿತ್ ಹೇಳಿದರು.
ಆರೋಗ್ಯವೂ ಸುಧಾರಣೆ: ತಿಂಗಳಿಂದ ಮದ್ಯ ಸಿಗದ ಕಾರಣಕ್ಕೆ ಹಲವರು ಇನ್ನುಮುಂದೆ ಮದ್ಯ ಸೇವನೆ ತ್ಯಜಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಮದ್ಯ ಸೇವನೆ ಬಿಡುವುದಾಗಿ ಪ್ರಕಟಿಸಿದ್ದಾರೆ! ಇದು ಯುವಕರ ಕತೆಯಾದರೆ, ಮಧ್ಯ ವಯಸ್ಕರೂ ಈಗ ಆರೋಗ್ಯದ ಕಡೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದಾರೆ. ಮದ್ಯ ಸೇವನೆ ಬಿಟ್ಟ ಮೇಲೆ ಆರೋಗ್ಯವೂ ಸುಧಾರಣೆಯಾಗಿದೆ ಎಂದು ಹಲವರು ನುಡಿದಿದ್ದಾರೆ.
ದುಡ್ಡು ಉಳಿತಾಯ: ನಿತ್ಯ ಒಬ್ಬ ಕಾರ್ಮಿಕ ಕನಿಷ್ಟ 100 ರೂ.ತನಕ ಕುಡಿತಕ್ಕೆ ಖರ್ಚು ಮಾಡುತ್ತಿದ್ದ. ಅಂದರೆ ತಿಂಗಳಿಗೆ 3-4 ಸಾವಿರ ಮದ್ಯ ಸೇವನೆಗೆ ಖರ್ಚಾಗುತ್ತಿತ್ತು. ಅದಕ್ಕೆಲ್ಲಾ ಈಗ ಲಾಕ್‌ಡೌನ್ ಕಡಿವಾಣ ಹಾಕಿದೆ. ದುಡಿಮೆ ಇಲ್ಲದಿದ್ದರೂ ಅನಗತ್ಯ ಖರ್ಚು ಮಾತ್ರ ಇಲ್ಲವಾಗಿದೆ ಎಂದು ಹಲವು ಹೇಳಿದರು.
ಶುಚಿ, ರುಚಿಯಾದ ಊಟ: ಸಂಜೆಯಾದರೆ ಸಾಕು ಎಲ್ಲೆಡೆ ಬಾರ್‌ಗಳು ತುಂಬಿರುತ್ತಿದ್ದವು. ಯುವಕರೇ ಹೆಚ್ಚಾಗಿ ಎಣ್ಣೆ ಹುಡುಕಿ ಹೋಗುತ್ತಿದ್ದರು. ಅದೆಲ್ಲವೂ ದೂರವಾಗಿದ್ದು, ಮನೆಯಲ್ಲಿ ಎಲ್ಲರೂ ಕಾಲ ಕಳೆಯುವಂತಾಗಿದೆ. ಮನೆಯಲ್ಲಿ ಶುಚಿ, ರುಚಿಯಾದ ಅಡುಗೆ ಸಿಗುತ್ತಿದೆ. ಪರಸ್ಪರ ಸಹಾಯ, ಸಹಕಾರ ವಾತಾವರಣ ಸೃಷ್ಟಿಯಾಗಿದೆ.
ತಿಂಗಳಿನಿಂದ ಮದ್ಯ ನಿಷೇಧ ಮಾಡಿರುವುದರಿಂದ ಮನೆಗಳಲ್ಲಿ ಜನರು ನೆಮ್ಮದಿಯಿಂದ ಕಾಲ ಕಳೆಯುವಂತಾಗಿದೆ. ಅನೇಕರು ತಾವು ಗಳಿಸಿದ ಹೆಚ್ಚಿನ ಹಣವನ್ನು ಮದ್ಯಕ್ಕಾಗಿ ಮೀಸಲಿಡುತ್ತಿದ್ದರು. ಕುಡಿದು ಬಂದು ಹೆಂಡತಿ, ಮಕ್ಕಳೊಂದಿಗೆ ಜಗಳ ತೆಗೆಯುವುದು ಸಾಮಾನ್ಯವಾಗಿತ್ತು. ಇವುಗಳಿಂದ ಮುಕ್ತಿ ಸಿಕ್ಕಿದೆ.
ಮಂಜುಳಾ ಶ್ರೀನಿವಾಸಪ್ಪ, ಕುಟುಂಬದ ಸದಸ್ಯೆ
ವಾರ್ಡ್‌ನ ಕೆಲ ಮದ್ಯವ್ಯಸನಿಗಳು ಲಾಕ್‌ಡೌನ್‌ನಿಂದಾಗಿ ಆರಂಭದಲ್ಲಿ ಮದ್ಯ ಸಿಗದೇ ಪರದಾಡುತ್ತಿದ್ದರು. ಕ್ರಮೇಣ ಮದ್ಯವಿಲ್ಲದೇ ಬದುಕುವುದನ್ನು ರೂಢಿಸಿಕೊಳ್ಳುತ್ತಿದ್ದಾರೆ. ಹೊಟ್ಟೆ ತುಂಬಾ ಊಟ ಮಾಡಿ, ದೈಹಿಕವಾಗಿ ಫಿಟ್ ಆಗಿದ್ದಾರೆ. ಕೆಲವರು ಮತ್ತೆ ಮದ್ಯದಂಗಡಿ ಶುರುವಾದರೂ ನಾವು ಅದನ್ನು ಮುಟ್ಟುವುದಿಲ್ಲ ಎಂದು ಪ್ರತಿಜ್ಞೆ ಕೂಡ ಮಾಡಿದ್ದಾರೆ.
ಸಂತೋಷ್, ಸ್ವಯಂ ಸೇವಕರು







