ಷರತ್ತಿನೊಂದಿಗೆ ವಸತಿಪ್ರದೇಶದ ನೆರೆಯ ಅಂಗಡಿಗಳನ್ನು ತೆರೆಯಲು ಕೇಂದ್ರ ಅನುಮತಿ
ಮಾಲ್‌ಗಳ ಬಾಗಿಲು ತೆರೆಯುವಂತಿಲ್ಲ

ಹೊಸದಿಲ್ಲಿ,ಎ.25: ಕೊರೋನ ವೈರಸ್ ಸೋಂಕು ಹರಡುವುದನ್ನು ತಡೆಯಲು ದೇಶಾದ್ಯಂತ ಹೇರಲಾಗಿರುವ ಲಾಕ್ ಡೌನ್ ನಲ್ಲಿ ಇನ್ನಷ್ಟು ವಿನಾಯಿತಿಗಳೊಂದಿಗೆ ಹೊಸ ಮಾರ್ಗಸೂಚಿಯನ್ನು ಕೇಂದ್ರ ಸರಕಾರವು ಶುಕ್ರವಾರ ತಡರಾತ್ರಿ ಹೊರಡಿಸಿದೆ. ಮಾಲ್‌ಗಳನ್ನು ಹೊರತುಪಡಿಸಿ ವಸತಿ ಪ್ರದೇಶಗಳಲ್ಲಿರುವ ಅಂಗಡಿಗಳನ್ನು ಕೆಲವು ಷರತ್ತುಗಳಿಗೊಳಪಟ್ಟು ತೆರೆಯಲು ಸರಕಾರವು ಅವಕಾಶ ನೀಡಿದ್ದು, ಆದೇಶವು ಶುಕ್ರವಾರದಿಂದಲೇ ಅನ್ವಯಗೊಂಡಿದೆ. ಈ ಸಡಿಲಿಕೆಗಳು ಹಾಟ್‌ಸ್ಪಾಟ್‌ಗಳು ಮತ್ತು ನಿಯಂತ್ರಣ ವಲಯಗಳಿಗೆ ಅನ್ವಯಿಸುವುದಿಲ್ಲ. ಮಾಸ್ಕ್‌ಗಳು ಮತ್ತು ಕೈಗವುಸುಗಳನ್ನು ಧರಿಸುವುದನ್ನು ಮತ್ತು ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುವುದನ್ನು ಕಡ್ಡಾಯಗೊಳಿಸಿ ರುವ ಕೇಂದ್ರ ಗೃಹ ಸಚಿವಾಲಯದ ಈ ಆದೇಶವು ಅಂಗಡಿಕಾರರು ಮತ್ತು ಬಳಕೆದಾರರು ಬಿಡುಗಡೆಯ ನಿಟ್ಟುಸಿರು ಬಿಡುವಂತೆ ಮಾಡಿದೆ. ಆದರೆ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಈಗಲೂ ಸ್ಥಗಿತಗೊಂಡಿರುವದರಿಂದ ಪುನರಾರಂಭಗೊಂಡ ಅಂಗಡಿಗಳ ನೌಕರರಿಗೆ ತಮ್ಮ ಕೆಲಸಕ್ಕೆ ಹೋಗುವುದು ಕಷ್ಟವಾಗಿದೆ.
ವಸತಿ ಸಮುಚ್ಚಯಗಳಲ್ಲಿಯ ಮತ್ತು ನೆರೆಹೊರೆ ಪ್ರದೇಶಗಳಲ್ಲಿಯ ಅಂಗಡಿಗಳು,ಸ್ವತಂತ್ರ ಅಂಗಡಿಗಳು ಸೇರಿದಂತೆ ಆಯಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಅಂಗಡಿಗಳು ಮತ್ತು ವಾಣಿಜ್ಯ ಕಾರ್ಯಸಂಸ್ಥೆ ಕಾಯ್ದೆಯಡಿ ನೋಂದಣಿಗೊಂಡಿರುವ ಎಲ್ಲ ಅಂಗಡಿಗಳಿಗೆ ಲಾಕ್‌ಡೌನ್ ನಿರ್ಬಂಧಗಳಿಂದ ವಿನಾಯಿತಿ ನೀಡಲಾಗಿದೆ. ಆದರೆ ಸಿಂಗಲ್ ಮತ್ತು ಮಲ್ಟಿ ಬ್ರಾಂಡ್ ಮಾಲ್‌ಗಳಲ್ಲಿಯ ಅಂಗಡಿಗಳನ್ನು ತೆರೆಯುವಂತಿಲ್ಲ ಎಂದು ಕೇಂದ್ರದ ಆದೇಶದಲ್ಲಿ ತಿಳಿಸಲಾಗಿದೆ.
ಆದೇಶದಲ್ಲಿ ಮಹಾನಗರ ಪಾಲಿಕೆಗಳು ಮತ್ತು ನಗರಸಭಾ ವ್ಯಾಪ್ತಿಯ ಹೊರಗಿನ ಮಾರುಕಟ್ಟೆ ಸಂಕೀರ್ಣಗಳ ಪುನರಾರಂಭಕ್ಕೆ ಅವಕಾಶವನ್ನು ಕಲ್ಪಿಸಲಾಗಿದೆ.
ಎಲ್ಲ ರೆಸ್ಟೋರೆಂಟ್ ಗಳು,ಸಲೂನುಗಳು,ಕ್ಷೌರದ ಅಂಗಡಿಗಳು ಮತ್ತು ಮದ್ಯದಂಗಡಿ ಗಳು ಮುಚ್ಚಿರಲಿವೆ. ಇ-ಕಾಮರ್ಸ್ ಕಂಪನಿಗಳು ಅಗತ್ಯ ವಸ್ತುಗಳನ್ನು ಮಾತ್ರ ಮಾರಾಟ ಮಾಡಬಹುದು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಪುನರಾರಂಭಗೊಂಡ ಅಂಗಡಿಗಳಲ್ಲಿನ ಸಿಬ್ಬಂದಿಗಳ ಸಂಖ್ಯೆಯನ್ನು ಶೇ.50ಕ್ಕೆ ಸೀಮಿತಗೊಳಿಸಲಾಗಿದೆ.
ಆದೇಶದಲ್ಲಿ ತಿಳಿಸಿರುವಂತೆ ಗ್ರಾಮೀಣ ಮತ್ತು ಅರೆ-ಗ್ರಾಮೀಣ ಪ್ರದೇಶಗಳಲ್ಲಿಯ ಎಲ್ಲ ನೋಂದಾಯಿತ ಅಂಗಡಿಗಳು ಮತ್ತು ಮಾರುಕಟ್ಟೆಗಳನ್ನು ಪುನರಾರಂಭಿಸಬಹುದು. ಮಾಲ್‌ಗಳು,ಸಿನೆಮಾ ಮಂದಿರಗಳು, ಜಿಮ್‌ಗಳು, ಕ್ರೀಡಾ ಸಂಕೀರ್ಣಗಳು, ಬಾರ್‌ಗಳು, ಆಡಿಟೋರಿಯಮ್‌ಗಳು ಮತ್ತು ಈಜುಗೊಳಗಳ ಮುಚ್ಚುಗಡೆ ಮುಂದುವರಿಯಲಿದೆ.
ಆದರೆ ಪರಿಷ್ಕೃತ ಮಾರ್ಗಸೂಚಿಯಲ್ಲಿನ ಸಡಿಲಿಕೆಗಳಿಗೆ ಅವಕಾಶ ನೀಡಬೇಕೇ ಅಥವಾ ನಿರ್ಬಂಧಗಳನ್ನು ಮುಂದುವರಿಸಬೇಕೇ ಎನ್ನುವುದನ್ನು ರಾಜ್ಯ ಸರಕಾರಗಳು ನಿರ್ಧರಿಸಬಹುದಾಗಿದೆ ಎಂದು ಕೇಂದ್ರವು ತಿಳಿಸಿದೆ. ಪರಿಸ್ಥಿತಿಯ ಅವಲೋಕನ ನಡೆಸಿದ ಹೊರತು ಅಂಗಡಿಗಳ ಪುನರಾರಂಭಕ್ಕೆ ಅವಕಾಶ ನೀಡುವುದಿಲ್ಲ ಎಂದು ದಿಲ್ಲಿ ಮತ್ತು ಅಸ್ಸಾಂ ಈಗಾಗಲೇ ಸ್ಪಷ್ಟಪಡಿಸಿವೆ. ಮುಂಬೈ ಮಹಾನಗರದಲ್ಲಿ ನಿರ್ಬಂಧಗಳು ಮುಂದುವರಿಯಲಿವೆ ಎಂದು ಪೊಲೀಸ್ ಇಲಾಖೆಯು ಶನಿವಾರ ಮಧ್ಯಾಹ್ನ ಟ್ವೀಟಿಸಿದೆ.
ಈ ವಾರದ ಪೂರ್ವಾರ್ಧದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕರೆಯ ಮೇರೆಗೆ ವಾಣಿಜ್ಯ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಸರಕಾರವು ನಿಯಂತ್ರಿತವಲ್ಲದ ಪ್ರದೇಶಗಳಲ್ಲಿ ಸಂಪೂರ್ಣ ಲಾಕ್‌ಡೌನ್‌ನಿಂದ ಕೆಲವು ವಿನಾಯಿತಿಗಳನ್ನು ಘೋಷಿಸಿತ್ತು.
ದೇಶಾದ್ಯಂತ 24,000ಕ್ಕೂ ಅಧಿಕ ಜನರು ಕೊರೋನ ವೈರಸ್ ಸೋಂಕು ಪೀಡಿತರಾಗಿದ್ದು,700ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ. ಮಾ.25ರಂದು ಹೇರಲಾಗಿದ್ದ ದೇಶವ್ಯಾಪಿ ಲಾಕ್‌ಡೌನ್ ಅನ್ನು ಕಳೆದ ವಾರ ಮೇ 3ರವರೆಗೆ ವಿಸ್ತರಿಸಲಾಗಿತ್ತು.
ಯಾವುದೆಲ್ಲ ತೆರೆದಿರುತ್ತವೆ?
*ವಸತಿ ಸಮುಚ್ಚಯಗಳಲ್ಲಿಯ ಮತ್ತು ನೆರೆಹೊರೆ ಪ್ರದೇಶಗಳಲ್ಲಿಯ ಅಂಗಡಿಗಳು, ಸ್ವತಂತ್ರ ಅಂಗಡಿಗಳು ಸೇರಿದಂತೆ ಆಯಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಅಂಗಡಿಗಳು ಮತ್ತು ವಾಣಿಜ್ಯ ಕಾರ್ಯಸಂಸ್ಥೆ ಕಾಯ್ದೆಯಡಿ ನೋಂದಣಿಗೊಂಡಿರುವ ಎಲ್ಲ ಅಂಗಡಿಗಳು. *ಮಹಾನಗರ ಪಾಲಿಕೆಗಳು ಮತ್ತು ನಗರಸಭಾ ವ್ಯಾಪ್ತಿಯ ಹೊರಗಿನ ಮಾರುಕಟ್ಟೆ ಸಂಕೀರ್ಣಗಳು
*ಗ್ರಾಮೀಣ ಮತ್ತು ಅರೆ-ಗ್ರಾಮೀಣ ಪ್ರದೇಶಗಳಲ್ಲಿಯ ಎಲ್ಲ ನೋಂದಾಯಿತ ಅಂಗಡಿಗಳು ಮತ್ತು ಮಾರುಕಟ್ಟೆಗಳು. *ನಗರ ಪ್ರದೇಶಗಳಲ್ಲಿಯ ಸ್ವತಂತ್ರ ಮತ್ತು ವಸತಿ ಸಮುಚ್ಚಯಗಳಲ್ಲಿನ ಅಗತ್ಯ ಮತ್ತು ಅಗತ್ಯವಲ್ಲದ ವಸ್ತುಗಳ ಅಂಗಡಿಗಳು ಹಾಗೂ ಸೇವೆಗಳು
ಯಾವುದೆಲ್ಲ ಮುಚ್ಚಿರುತ್ತವೆ?
* ಮಾಲ್‌ಗಳು ಮತ್ತು ಸಿನಿಮಾ ಮಂದಿರಗಳು
* ರೆಸ್ಟೋರೆಂಟ್‌ಗಳು,ಸಲೂನುಗಳು,ಕ್ಷೌರದ ಅಂಗಡಿಗಳು
* ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಅಥವಾ ದಿಲ್ಲಿಯ ಖಾನ್ ಮಾರ್ಕೆಟ್ ಮತ್ತು ನೆಹರು ಪ್ಲೇಸ್‌ನಂತಹ ಸಂಕೀರ್ಣಗಳು
*ಮಹಾನಗರ ಪಾಲಿಕೆ ಮತ್ತು ನಗರಸಭಾ ವ್ಯಾಪ್ತಿಗಳ ಹೊರಗಿನ ಮಲ್ಟಿ ಬ್ರಾಂಡ್ ಮತ್ತು ಸಿಂಗಲ್ ಬ್ರಾಂಡ್ ಮಾಲ್‌ಗಳಲ್ಲಿನ ಅಂಗಡಿಗಳು
* ಶಾಪಿಂಗ್ ಕಾಂಪ್ಲೆಕ್ಸ್‌ಗಳು,ಮಾರ್ಕೆಟ್ ಕಾಂಪ್ಲೆಕ್ಸ್‌ನಲ್ಲಿಯ ಅಂಗಡಿಗಳು,ಮಲ್ಟಿ ಬ್ರಾಂಡ್ ಮತ್ತು ಸಿಂಗಲ್ ಬ್ರಾಂಡ್ ಮಾಲ್‌ಗಳು
* ಜಿಮ್‌ಗಳು,ಕ್ರೀಡಾ ಸಂಕೀರ್ಣಗಳು,ಬಾರ್‌ಗಳು,ಆಡಿಟೋರಿಯಮ್‌ಗಳು ಮತ್ತು ಈಜುಗೊಳಗಳು
* ಮದ್ಯದಂಗಡಿಗಳು
* ಮಾಲ್‌ಗಳಲ್ಲಿಯ ಬಾಟಿಕ್‌ಗಳು







