ವಿಶ್ವಕಪ್ ಜಯ ಜೀವನದ ಅತ್ಯಂತ ಸುಂದರ ಕ್ಷಣ: ಸಚಿನ್
47ನೇ ಹುಟ್ಟು ಹಬ್ಬ ಆಚರಣೆಯಿಂದ ದೂರ ಉಳಿದ ಸಚಿನ್ ತೆಂಡುಲ್ಕರ್

ಮುಂಬೈ: ‘‘ಭಾರತ 2011ರಲ್ಲಿ ವಿಶ್ವಕಪ್ ಜಯಿಸಿರುವುದು ಕ್ರಿಕೆಟ್ ವೃತ್ತಿ ಜೀವನದಲ್ಲಿ ಅತ್ಯಂತ ಸುಂದರ ಕ್ಷಣವಾಗಿದೆ. ಇದಕ್ಕಿಂತ ದೊಡ್ಡ ಕ್ಷಣ ಇರಲು ಸಾಧ್ಯವಿಲ್ಲ. ಭಾರತ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಅದು ನನ್ನ ಜೀವನದ ಅತ್ಯುತ್ತಮ ಕ್ರಿಕೆಟಿಂಗ್ ಕ್ಷಣವಾಗಿದೆ’’ಎಂದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಹೇಳಿದ್ದಾರೆ.
2011ರ ಎಪ್ರಿಲ್ 2ರ ರಾತ್ರಿ ಎಂ.ಎಸ್. ಧೋನಿ ಸಿಕ್ಸರ್‌ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದಾಗ ‘ಲಿಟಲ್ ಮಾಸ್ಟರ್’ ವಾಂಖೆಡೆ ಸ್ಟೇಡಿಯಂಗೆ ಮೆಟ್ಟಿಲುಗಳನ್ನು ಇಳಿದು ಓಡಿ ಬಂದರು. ವಾಂಖೆಡೆ ಯಲ್ಲಿ ಅವರು ಒಂದು ಹಂತದ ನಂತರ ಆಟವನ್ನು ಆಡುತ್ತಾ ಬೆಳೆದಿದ್ದಾರೆ.
ಸಚಿನ್ ಅವರನ್ನು ತಂಡದ ಸಹ ಆಟಗಾರರು ಎತ್ತಿ ಹೆಗಲ ಮೇಲೆ ಕುಳ್ಳಿರಿಸಿ ಕ್ರೀಡಾಂಗಣದ ಸುತ್ತಲೂ ಪ್ರದಕ್ಷಿಣೆ ಹಾಕಿದ್ದರು. ಭಾರತ ಇದೀಗ ವಿಶ್ವಕಪ್ ಜಯಿಸಿ 9 ವರ್ಷ ಸಂದಿವೆ. ಸಚಿನ್ ಅವರ 47ನೇ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಇಂದು ಅಂತರ್‌ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಕ್ರಿಕೆಟ್ ವಿಶ್ವಕಪ್ ಅಧಿಕೃತ ಇನ್‌ಸ್ಟ್ಟಾಗ್ರಾಮ್‌ನಲ್ಲಿ 2011ರ ವಿಶ್ವಕಪ್ ವಿಜಯೋತ್ಸವದ ಬಗ್ಗೆ ತನ್ನ ಅಭಿಪ್ರಾಯವನ್ನು ಹಂಚಿಕೊಂಡಿದೆ. ‘‘ನಾನು ತಂಡಕ್ಕೆ ಹೆಚ್ಚು ರನ್ ಗಳಿಸಿದವನು. ನನ್ನ ಕೊಡುಗೆ ಆಗ ಯೋಗ್ಯವಾಗಿತ್ತು. ಕೊನೆಯಲ್ಲಿ ಟ್ರೋಫಿ ನಮ್ಮ ಡ್ರೆಸ್ಸಿಂಗ್ ಕೋಣೆಯಲ್ಲಿದೆ ಎಂಬುದು ಮುಖ್ಯ’’ ಎಂದು ತನ್ನ ಆರನೇ ಪ್ರಯತ್ನದಲ್ಲಿ ಅತಿದೊಡ್ಡ ಟ್ರೋಫಿಯನ್ನು ಗೆದ್ದ ಬಗ್ಗೆ ಸಚಿನ್ ಹೇಳಿದ್ದಾರೆ.
‘‘ಹೌದು, ನಾನು ಮೊದಲ ಬಾರಿಗೆ ಇಂಡಿಯಾ ಕ್ಯಾಪ್ ಧರಿಸಿದಾಗ ನಾನು ಉತ್ಸುಕನಾಗಿದ್ದೆ.ಆದರೆ ಅದು 2011ಕ್ಕೆ ಏನೂ ಹೊಂದಿಕೆಯಾಗುವುದಿಲ್ಲ. ಇಡೀ ರಾಷ್ಟ್ರವು ಒಟ್ಟಾಗಿ ಆಚರಿಸುವುದನ್ನು ನೀವು ನೋಡುವುದು ಬಹಳ ವಿರಳ’’ಎಂದು ಹೇಳಿದರು.
1989ರಲ್ಲಿ ಕರಾಚಿಯಲ್ಲಿ ಪಾಕಿಸ್ತಾನ ವಿರುದ್ಧ 16 ವರ್ಷದ ಸಚಿನ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಮಾಸ್ಟರ್ ಬ್ಯಾಟ್ಸ್‌ಮನ್ ಭಾರತಕ್ಕಾಗಿ 200 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ 100 ಶತಕಗಳನ್ನು ಗಳಿಸಿದರು. 463 ಏಕದಿನ ಪಂದ್ಯಗಳಲ್ಲಿ ತೆಂಡುಲ್ಕರ್ 18,426 ರನ್ ಗಳಿಸಿದ್ದಾರೆ ಮತ್ತು ಟೆಸ್ಟ್ ಪಂದ್ಯಗಳಲ್ಲಿ 15,921 ರನ್ ಗಳಿಸಿದ್ದಾರೆ.
ತಾಯಿಯ ಆಶೀರ್ವಾದ ಅಮೂಲ್ಯ
ಭಾರತದ ಕ್ರಿಕೆಟ್ ದಂತಕತೆ ಸಚಿನ್ ತೆಂಡುಲ್ಕರ್ ಶುಕ್ರವಾರ 47ನೇ ವಸಂತಕ್ಕೆ ಕಾಲಿಟ್ಟಿದ್ದು, ತಾಯಿಯ ಆಶೀರ್ವಾದ ಪಡೆದು ವಿಶೇಷ ದಿನವನ್ನು ಆರಂಭಿಸಿದರು. ತಾಯಿಯ ಆಶೀರ್ವಾದ ಬೆಲೆಕಟ್ಟಲಾಗದು ಎಂದು ಬಣ್ಣಿಸಿದರು.
ತೆಂಡುಲ್ಕರ್‌ಗೆ ತಾಯಿ ಗಣೇಶನ ಮೂರ್ತಿಯನ್ನು ಉಡುಗೊರೆಯಾಗಿ ನೀಡಿದರು.
‘‘ನನ್ನ ತಾಯಿಯ ಆಶೀರ್ವಾದ ಪಡೆದು ವಿಶೇಷ ದಿನವನ್ನು ಆರಂಭಿಸಿದೆ. ಅವರು ಉಡುಗೊರೆ ನೀಡಿರುವ ಗಣಪತಿ ಮೂರ್ತಿಯ ಫೋಟೊವನ್ನು ಹಂಚಿಕೊಳ್ಳುತ್ತಿದ್ದೇನೆ. ಇದು ಅಮೂಲ್ಯ ಕ್ಷಣ’’ಎಂದು ಟ್ವಿಟರ್‌ನಲ್ಲಿ ತೆಂಡುಲ್ಕರ್ ಬರೆದಿದ್ದಾರೆ.
ತನ್ನ ಸುದೀರ್ಘ ವೃತ್ತಿಜೀವನದಲ್ಲಿ ಹಲವು ಸಾಧನೆ ಮಾಡಿರುವ ತೆಂಡುಲ್ಕರ್‌ಗೆ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಶುಭಾಶಯಗಳ ಸುರಿಮಳೆಯಾಗಿದೆ.
47ನೇ ಹುಟ್ಟು ಹಬ್ಬ ಆಚರಣೆಯಿಂದ ದೂರ ಉಳಿದ ಸಚಿನ್ ತೆಂಡುಲ್ಕರ್
ಕೋವಿಡ್-19 ಪಿಡುಗಿನಿಂದಾಗಿ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳದೇ ಇರಲು ಕ್ರಿಕೆಟ್ ಲೆಜೆಂಡ್ ನಿರ್ಧರಿಸಿದ್ದಾರೆ.
ತೆಂಡುಲ್ಕರ್ ಕೊರೋನ ಕುರಿತು ಸಕ್ರಿಯವಾಗಿ ಜಾಗೃತಿ ಮೂಡಿಸುತ್ತಿದ್ದು, ಕೊರೋನ ವೈರಸ್ ವಿರುದ್ಧ ಹೋರಾಡಲು 50 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಮುಂಬೈನ 5,000 ಜನರಿಗೆ ಒಂದು ತಿಂಗಳ ಪಡಿತರವನ್ನು ವಿತರಿಸಿದ್ದಾರೆ.
‘‘ನಾನು ಈ ಬಾರಿ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿಲ್ಲ. ಈಗಿನ ಪರಿಸ್ಥಿತಿಯಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುವುದು ಸರಿಯಲ್ಲ’’ ಎಂದು ಸ್ಪೋರ್ಟ್ ಸ್ಟಾರ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು.
ತೆಂಡುಲ್ಕರ್ ಮಾರ್ಚ್ 15ರಿಂದ ಸ್ನೇಹಿತರು ಇಲ್ಲವೇ ಸಂಬಂಧಿಕರನ್ನು ಭೇಟಿಯಾಗಿಲ್ಲ.







