ಮಂಡ್ಯ: ಪತ್ರಕರ್ತರಿಗೆ ಕೋವಿಡ್-19 ಪರೀಕ್ಷೆ ನಡೆಸುವುದಕ್ಕೆ ಅಡ್ಡಿಪಡಿಸಿದ ವಿಧಾನ ಪರಿಷತ್ ಸದಸ್ಯ, ಪುತ್ರ

ಮಂಡ್ಯ, ಎ.25: ಪತ್ರಕರ್ತರಿಗೆ ಕೋವಿಡ್-19 ಪರೀಕ್ಷೆ ಮಾಡುವುದಕ್ಕೆ ವಿಧಾನ ಪರಿಷತ್ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ಅಡ್ಡಿಪಡಿಸಿದ ಘಟನೆ ಶನಿವಾರ ನಗರದಲ್ಲಿ ನಡೆದಿದೆ.
ತನ್ನ ಮನೆಯ ಸಮೀಪವಿರುವ ಅಂಬೇಡ್ಕರ್ ಭವನದಲ್ಲಿ ಪತ್ರಕರ್ತರಿಗೆ ಕೊರೋನ ಪರೀಕ್ಷೆ ನಡೆಯುತ್ತಿದ್ದ ವೇಳೆ ಶ್ರೀಕಂಠೇಗೌಡ ಮತ್ತು ಪುತ್ರ ಹಾಗೂ ಇತರರು ಆಕ್ಷೇಪ ವ್ಯಕ್ತಪಡಿಸಿದರೆನ್ನಲಾಗಿದೆ.
ಈ ಸಂದರ್ಭದಲ್ಲಿ ಪತ್ರಕರ್ತರು ಹಾಗೂ ಶ್ರೀಕಂಠೇಗೌಡ, ಅವರ ಪುತ್ರ ಹಾಗೂ ಬಡಾವಣೆಯ ಇತರರ ನಡುವೆ ವಾಗ್ವಾದ, ತಳ್ಳಾಟ ಶುರುವಾಗಿ ಉದ್ರಿಕ್ತ ವಾತಾವರಣ ನಿರ್ಮಾಣವಾಗಿತ್ತು, ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಶ್ರೀಕಂಠೇಗೌಡ ಪುತ್ರನನ್ನು ವಶಕ್ಕೆ ಪಡೆದು ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಅಂಬೇಡ್ಕರ್ ಭವನದ ಆವರಣದಲ್ಲಿ ನೆರೆದಿದ್ದ ಜನರನ್ನು ಲಘು ಲಾಠಿ ಪ್ರಹಾರ ನಡೆಸಿ ಚದುರಿಸಿದರು.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಡಿಸಿ ಡಾ. ವೆಂಕಟೇಶ್ ಮತ್ತು ಎಸ್ಪಿ ಪರಿಸ್ಥಿತಿ ನಿಯಂತ್ರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಪದಾಧಿಕಾರಿಗಳು, ಕೆ.ಟಿ.ಶ್ರೀಕಂಠೇಗೌಡ, ಪುತ್ರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದರು.
ಸುಮಲತಾ ಅಂಬರೀಷ್ ಖಂಡನೆ:
ಘಟನೆಯನ್ನು ಖಂಡಿಸಿರುವ ಸಂಸದೆ ಸುಮಲತಾ ಅಂಬರೀಷ್, ಸರಕಾರದ ಶಿಷ್ಟಾಚಾರದ ಪ್ರಕಾರ ಹಾಗೂ ಮುಖ್ಯಮಂತ್ರಿಗಳ ಆದೇಶದ ಮೇರೆಗೆ ಮಂಡ್ಯ ಜಿಲ್ಲಾಡಳಿತವು ಪತ್ರಕರ್ತರಿಗೆ ಕೊರೋನ ವೈರಸ್ ಪರೀಕ್ಷೆಯನ್ನು ನಗರದ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಎಂಎಲ್ಸಿ ಶ್ರೀಕಂಠೇಗೌಡರು ಮತ್ತು ಅವರ ಪುತ್ರ ಹಾಗೂ ಸ್ಥಳೀಯರೊಂದಿಗೆ ಬಂದು ಅಡ್ಡಿಪಡಿಸಿರುವುದು ನನ್ನ ಗಮನಕ್ಕೆ ಬಂದಿದ್ದು, ಪತ್ರಕರ್ತರ ಸೇವೆ ಈ ಒಂದು ಸಂದರ್ಭದಲ್ಲಿ ಅತಿ ಅಗತ್ಯವಿದೆ ಎಂದು ಪ್ರಧಾನ ಮಂತ್ರಿಯವರೇ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಪತ್ರಕರ್ತರನ್ನು ಪರೀಕ್ಷೆಗೆ ಒಳಪಡಿಸಿ ಅವರಿಗೆ ಆತ್ಮಸ್ಥೈರ್ಯ ತುಂಬುವುದು ಜಿಲ್ಲಾಡಳಿತದ ಉದ್ದೇಶವಾಗಿತ್ತು. ಈ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿರುವುದನ್ನು ಅವರು ಖಂಡಿಸಿದ್ದಾರೆ.
ಪ್ರಕರಣ ದಾಖಲಿಸಲು ಒತ್ತಾಯ:
ಮಂಡ್ಯ ನಗರದಲ್ಲಿ ಪತ್ರಕರ್ತರ ಮೇಲೆ ಹಲ್ಲೆ ನಡೆಸಿರುವ ಎಂಎಲ್ಸಿ ಶ್ರೀಕಂಠೇಗೌಡ ಮತ್ತವರ ಪುತ್ರ ವಿರುದ್ಧ ಇತ್ತೀಚೆಗೆ ಜಾರಿಗೊಳಿಸಿರುವ ಸುಗ್ರೀವಾಜ್ಞೆ ಪ್ರಕಾರ ಪ್ರಕರಣ ದಾಖಲಿಸಬೇಕೆಂದು ಮುಖ್ಯಮಂತ್ರಿಯಲ್ಲಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ರಾಜ್ಯಾಧ್ಯಕ್ಷ ನಾರಾಯಣ್ ಒತ್ತಾಯಿಸಿದ್ದಾರೆ.
ಪ್ರಾಣ ಪಣಕ್ಕಿಟ್ಟು ಜನರಲ್ಲಿ ಅರಿವು ಮೂಡಿಸಲು ಪ್ರಯತ್ನಿಸುತ್ತಿರುವ ಪತ್ರಕರ್ತರ ಮೇಲೆ ರಾಜ್ಯದ ಯಾವುದೇ ಭಾಗದಲ್ಲಿ ಈ ರೀತಿಯ ಹಲ್ಲೆ ನಡೆದಲ್ಲಿ ಈ ಕಾಯ್ದೆಯನ್ವಯ ಕ್ರಮ ಜರುಗಿಸಬೇಕೆಂದು ಅವರು ಆಗ್ರಹಿಸಿದ್ದಾರೆ.









