'ಪಡಿತರ ಅಕ್ಕಿ ಅಕ್ರಮ ಸಂಗ್ರಹಣೆ' ಎಂಬ ಡಿಕೆಶಿ ಆರೋಪದ ಬಗ್ಗೆ ಸಚಿವ ಗೋಪಾಲಯ್ಯ ಪ್ರತಿಕ್ರಿಯೆ

ಸಚಿವ ಗೋಪಾಲಯ್ಯ
ಬೆಂಗಳೂರು, ಎ.25: ಕೇಂದ್ರ ಸರಕಾರ ಬಡವರಿಗೆ ವಿತರಣೆ ಮಾಡಿದ್ದ ಅಕ್ಕಿ ಮೂಟೆಗಳನ್ನು ಬಿಜೆಪಿ ಮುಖಂಡರು ಗೋದಾಮುಗಳಲ್ಲಿ ಅಕ್ರಮವಾಗಿ ಸಂಗ್ರಹಣೆ ಮಾಡಿದ್ದಾರೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾಡಿರುವ ಆರೋಪ ಸತ್ಯಕ್ಕೆ ದೂರವಾದದ್ದೆಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಗೋಪಾಲಯ್ಯ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಲಾಕ್ಡೌನ್ ಉಂಟಾದ ಪರಿಣಾಮ ಸ್ಥಳದ ಅಭಾವ ಎದುರಾದ ಕಾರಣ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಮಾರ್ಚ್ ಮತ್ತು ಎಪ್ರಿಲ್ ತಿಂಗಳ ಒಟ್ಟು 14,260 ಕ್ವಿಂಟಾಲ್ ಆಹಾರ ಧಾನ್ಯಗಳನ್ನು ದೊಮ್ಮಸಂದ್ರದ ರೇಷ್ಮೆ ಬೆಳೆಗಾರರು ಮತ್ತು ರೈತರ ಸೇವಾ ಸಹಕಾರ ಸಂಘಕ್ಕೆ ಸೇರಿದ ಗೋದಾಮುಗಳಲ್ಲಿ ಸಂಗ್ರಹಣೆ ಮಾಡಲು ತೀರ್ಮಾನ ಮಾಡಲಾಗಿತ್ತು.
ಆದರೆ, ಆನೇಕಲ್ ತಾಲೂಕಿನ ವ್ಯಾಪ್ತಿಯಲ್ಲಿನ ಸರ್ಜಾಪುರ ಹೋಬಳಿಯಲ್ಲಿ ಎಸ್ಎಫ್ಎಸ್ಸಿಎಸ್ ಗೋದಾಮು ಭರ್ತಿಯಾದ ಹಿನ್ನೆಲೆಯಲ್ಲಿ ಖಾಸಗಿ ಗೋದಾಮುಗಳಲ್ಲಿ ಆಹಾರ ಧಾನ್ಯಗಳನ್ನು ಸಂಗ್ರಹಿಸುವಂತೆ ತಾಲೂಕಿನ ತಹಶೀಲ್ದಾರ್ ಸೂಚನೆ ಕೊಟ್ಟಿದ್ದಾರೆ. ಎಲ್ಲವೂ ಮೇಲಿನ ಅಧಿಕಾರಿಗಳ ಸೂಚನೆಯ ಮೇರೆಗೆ ನಡೆಯುತ್ತಿದೆ. ಹೀಗಾಗಿ ಅಕ್ರಮವಾಗಿ ಸಂಗ್ರಹಣೆ ಮಾಡಿರುವ ಪ್ರಶ್ನೆಯೇ ಉದ್ಬವಿಸಿಲ್ಲವೆಂದು ಅವರು ತಿಳಿಸಿದರು.
ನಿಯಮಾನುಸಾರವಾಗಿಯೇ ಆಹಾರ ಧಾನ್ಯಗಳನ್ನು ಗೋದಾಮುಗಳಲ್ಲಿ ಸಂಗ್ರಹಿಸಿಡಲಾಗಿದೆ. ಇದಕ್ಕೆ ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಕೂಡ ಸಮ್ಮತಿ ನೀಡಿ ಪತ್ರವನ್ನು ನೀಡಿದ್ದಾರೆ. ಆಹಾರ ಧಾನ್ಯಗಳು ಮಧ್ಯವರ್ತಿಗಳ ಪಾಲಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.







