ಕೇಂದ್ರ, ರಾಜ್ಯ ಸರಕಾರದ ಸೌಲಭ್ಯ ಅರ್ಹರಿಗೆ ತಲುಪಿಲ್ಲ: ಸಭಾಪತಿ

ಉಡುಪಿ, ಎ.25: ಲಾಕ್‌ಡೌನ್‌ನಿಂದಾಗಿ ಜನಸಾಮಾನ್ಯರು ಕಷ್ಟದಲ್ಲಿದ್ದು, ಕೇಂದ್ರ ಹಾಗೂ ರಾಜ್ಯ ಸರಕಾರದ ಯಾವುದೇ ಸೌಲಭ್ಯಗಳು ಕೂಡ ಬಡವರಿಗೆ ತಲುಪಿಲ್ಲ. ಸರಕಾರ ಪ್ರಚಾರಕ್ಕಾಗಿ ಪ್ಯಾಕೇಜ್ ಘೋಷಿಸುತ್ತಿದ್ದು, ಇದರಿಂದ ಯಾರಿಗೂ ಪ್ರಯೋಜನ ಆಗಿಲ್ಲ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಟಾಸ್ಕ್ ಪೋರ್ಸ್ ಸಮಿತಿ ಅಧ್ಯಕ್ಷ ಯು.ಆರ್.ಸಭಾಪತಿ ಆರೋಪಿಸಿದ್ದಾರೆ.
ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಕಾಂಗ್ರೆಸ್ ಭವನದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಬ್ಲಾಕ್ ಮಟ್ಟದಲ್ಲಿ ಲಾಕ್‌ಡೌನ್ ಸಂಕಷ್ಟಕ್ಕೆ ಸಿಲುಕಿದ ಕುಟುಂಬಗಳಿಗೆ ಅಕ್ಕಿ ಹಾಗೂ ದಿನಸಿ ಕಿಟ್‌ಗಳನ್ನು ವಿತರಿಸಿ ಅವರು ಮಾತನಾಡುತಿದ್ದರು.
ಜಿಲ್ಲೆಯ ವಿವಿಧ ಬ್ಲಾಕ್‌ನಲ್ಲಿರುವ ಅರ್ಹರಿಗೆ ತಲುಪಿಸುವಂತೆ ಬ್ಲಾಕ್ ಮುಖಂಡರಿಗೆ ತಲಾ 1.5 ಟನ್‌ನಂತೆ ಅಕ್ಕಿಯನ್ನು ವಿತರಿಸಲಾಗುತ್ತದೆ. 5 ಕೆ.ಜಿ. ಅಕ್ಕಿ, ಸಕ್ಕರೆ, ತೊಗರೆಬೇಳೆ, ಚಹಾಪುಡಿ ಸಹಿತ ವಿವಿಧ ಸಾಮಾಗ್ರಿಗಳ ಸುಮಾರು 2500 ಕಿಟ್‌ಗಳನ್ನು ಅರ್ಹರಿಗೆ ನೀಡಲಾಗಿದೆ. ಜಿಲ್ಲೆಯ ಎಲ್ಲಾ ಬ್ಲಾಕ್‌ಗಳಲ್ಲಿ 10 ಸಾವಿರ ಕಿಟ್‌ಗಳನ್ನು ವಿತರಿಸುವ ನಿರ್ಧಾರ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ, ಜಿಲ್ಲೆಯ ಜನತೆ ಸಹಕಾರದಿಂದ ಲಾಕ್‌ಡೌನ್ ಯಶಸ್ಸಿಯಾಗಿ ಕೊರೋನ ನಿಯಂತ್ರಣದಲ್ಲಿದೆ. ಹಿಂದಿನ ಸಿದ್ದರಾಮಯ್ಯ ಸರಕಾರ ಶೇ.30ರಷ್ಟಿದ್ದ ಪಡಿತರ ಕಾರ್ಡ್‌ನ್ನು ಶೇ. 80ಕ್ಕೆ ಹೆಚ್ಚಿಸಿದ್ದ ಪರಿಣಾಮ ಇಂದು ಬಡವರು ಹಸಿವಿನಿಂದ ಇರುವ ಪರಿಸ್ಥಿತಿ ನಿರ್ಮಾಣವಾಗಲಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ನಗರಸಭಾ ಸದಸ್ಯ ರಮೇಶ್ ಕಾಂಚನ್, ಮುಖಂಡರಾದ ಕಿಶನ್ ಹೆಗ್ಡೆ ಕೊಳ್ಕಬೈಲು, ಎಂ.ಎ. ಗೂರ್, ಪ್ರಖ್ಯಾತ್ ಶೆಟ್ಟಿ, ಉದ್ಯಾವರ ನಾಗೇಶ್ ಕುಮಾರ್, ಮಹಾಬಲ ಕುಂದರ್, ಜನಾರ್ದನ ಭಂಡಾರ್‌ಕರ್, ಯತೀಶ್ ಕರ್ಕೇರ, ವರೋನಿಕಾ ಕರ್ನೇಲಿಯೋ, ಉಪೇಂದ್ರ ಗಾಣಿಗ, ಹಬೀಬ್ ಅಲಿ, ಕೆ.ಶ್ರೀನಿವಾಸ್ ಹೆಬ್ಬಾರ್, ನಿತ್ಯಾನಂದ ಶೆಟ್ಟಿ ಉಪಸ್ಥಿತರಿದ್ದರು.







