ಮಹೇಂದ್ರ ಕುಮಾರ್ ನಿಧನ: ಜಮಾಅತೆ ಇಸ್ಲಾಮೀ ಹಿಂದ್, ಸಿಪಿಐಎಂ, ಸಿಐಟಿಯು ಸಂತಾಪ
ಉಡುಪಿ, ಎ.25: ಮಹೇಂದ್ರ ಕುಮಾರ್ ಮತ್ತು ನಾನು ಸಿಎಎ ವಿರೋಧಿ ಹೋರಾಟದಲ್ಲಿ ಸಾಕಷ್ಟು ಬಾರಿ ಜೊತೆಯಾಗಿ ವೇದಿಕೆ ಹಂಚಿ ಕೊಂಡಿದ್ದೆವು. ಸತ್ಯವನ್ನು ನೇರವಾಗಿ ಯಾವುದೇ ಮುಲಾಜಿಲ್ಲದೆ ಹೇಳುವ ವ್ಯಕ್ತಿತ್ವ ಇವರದ್ದಾ ಗಿತ್ತು. ಇವರು ನಮ್ಮನ್ನು ಅಗಲಿರುವುದು ಬಹಳ ನೋವಿನ ಸಂಗತಿ. ಅವರ ಕುಟುಂಬದವರಿಗೆ, ಅಭಿಮಾನಿಗಳಿಗೆ ದುಃಖ ಸಹಿಸುವ ಶಕ್ತಿ ಬರಲಿ ಎಂದು ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಕ್ಬರ್ ಅಲಿ ಉಡುಪಿ ಸಂತಾಪ ವ್ಯಕ್ತಪಡಿಸಿದ್ದಾರೆ.
ಸಿಪಿಐಎಂ ತೀವ್ರ ಸಂತಾಪ
ಪ್ರಗತಿಪರ ಚಿಂತಕ, ಸಾಮಾಜಿಕ ಹೋರಾಟಗಾರ ಮಹೇಂದ್ರ ಕುಮಾರ್ ನಿಧನಕ್ಕೆ ಸಿಪಿಐಎಂ ಉಡುಪಿ ಜಿಲ್ಲಾ ಸಮಿತಿ ಸಂತಾಪ ವ್ಯಕ್ತಪಡಿಸಿದೆ.
ಅಲ್ಪಸಂಖ್ಯಾತ ವಿರೋಧಿ ದ್ವೇಷವನ್ನು ಹಬ್ಬಿಸುತಿದ್ದ ಸಂಘ ಪರಿವಾರವನ್ನು ವಿರೋಧಿಸಿ ಹೊರ ಬಂದ ಮಹೇಂದ್ರ ಕುಮಾರ್ ಕೊನೆ ಉಸಿರಿನ ತನಕವೂ ಪ್ರಗತಿಪರ ಚಿಂತನೆ ಮತ್ತು ಜಾತ್ಯಾತೀತ ಧೋರಣೆಗಳನ್ನು ಜನರ ನಡುವೆ ಬಿತ್ತಲು ತೀವ್ರ ಪ್ರಯತ್ನ ನಡೆಸಿದರು ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಿಐಟಿಯು ತೀವ್ರ ಸಂತಾಪ
ಕೋಮುವಾದ ವಿರೋಧಿ ಹೋರಾಟಗಾರ, ಸೌಹಾದರ್ ಸಹಬಾಳ್ವೆಗಾಗಿ ನಿರಂತರ ಜಾಗೃತಿ ಮೂಡಿಸಲು ಹೋರಾಡಿದ ಸಾಮಾಜಿಕ ಕಾರ್ಯಕರ್ತ ಮಹೆಂದ್ರಕುಮಾರ್ ನಿಧನಕ್ಕೆ ಸಿಐಟಿಯು ಉಡುಪಿ ಜಿಲ್ಲಾ ಸಮಿತಿ ತೀವ್ರ ಸಂತಾಪ ಸಲ್ಲಿಸಿದೆ.
ಸೌಹಾರ್ದತೆಗಾಗಿ ತನ್ನದೇ ಆದ ’ನಮ್ಮ ಧ್ವನಿ’ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದ ಮಹೆಂದ್ರ ಕುಮಾರ್ ನಿಧನದಿಂದಾಗಿ ನಾಡಿನ ಕೋಮು ಸೌಹಾರ್ದತೆಗೆ ಹಿನ್ನಡೆಯಾದಂತಾಗಿದೆ. ಇಂತಹ ದಿಟ್ಟ ಹೋರಾಟಗಾರರನ್ನು ಕಳೆದುಕೊಂಡ ಸರ್ವಜನಾಂಗದ ಶಾಂತಿಯ ತೋಟವಾಗಿರುವ ಕನ್ನಡನಾಡಿಗೆ ನಷ್ಟವಾಗಿದೆ ಎಂದು ಸಿಐಟಿಯು ಅಧ್ಯಕ್ಷ ಕೆ.ಶಂಕರ್ ಹಾಗೂ ಪ್ರಧಾನ ಕಾರ್ಯ ದರ್ಶಿ ಸುರೇಶ್ ಕಲ್ಲಾಗರ ಹೇಳಿಕೆಯಲ್ಲಿ ತಿಳಿಸಿದ್ದಾರೆ.







