ಉಡುಪಿಯಲ್ಲಿ ಕಂಡ ಶೂನ್ಯ ನೆರಳು ದಿನ!

ಉಡುಪಿ, ಎ.25: ಕೋವಿಡ್-18 ಹಾಗೂ ಲಾಕ್‌ಡೌನ್ ದಿನಗಳಲ್ಲಿ ಬಂದ ನಿಸರ್ಗದ ವೈಚಿತ್ರಗಳಲ್ಲಿ ಒಂದಾದ ಶೂನ್ಯ ನೆರಳಿನ ಪ್ರಕ್ರಿಯೆಯನ್ನು ಇಂದು ಉಡುಪಿ ಸುತ್ತಮುತ್ತಲಿನ ಆಸಕ್ತ ವಿದ್ಯಾರ್ಥಿಗಳು ಮನೆಯಲ್ಲೇ ಕುಳಿತು ವೀಕ್ಷಿಸಿ ಖುಷಿ ಪಟ್ಟರು.
ಇವರಲ್ಲಿ ನಗರದ ಪೂರ್ಣಪ್ರಜ್ಞ ಕಾಲೇಜಿನ ಪ್ರಥಮ ಬಿಎಸ್ಸಿ ವಿದ್ಯಾರ್ಥಿನಿ ಶುಭಶ್ರೀ ಶೆಣೈ, ನಿಸರ್ಗದ ಈ ಪ್ರಕ್ರಿಯೆ ಮೂಲಕ ಮಾನವೀಯ ವೌಲ್ಯವನ್ನು ಪಸರಿಸುವ ಸಂದೇಶವೊಂದನ್ನು ನೀಡುವ ಪ್ರಯತ್ನ ನಡೆಸಿ ಎಲ್ಲರ ಗಮನ ಸೆಳೆದಿದ್ದಾರೆ.
ತಮಗೆ ಬೇಕಾದಂಥ ಆಕಾರದಲ್ಲಿ ಕೊರೆದ ವಸ್ತುವನ್ನು ಬಿಸಿಲಿನಲ್ಲಿ ಕೊಂಚ ಎತ್ತರದಲ್ಲಿ ಅದರ ಮೂಲಕ ಸೂರ್ಯಕಿರಣಗಳು ಪ್ರವೇಶಿಸುವಂತೆ ಇಟ್ಟರೆ, ನೆರಳು ಸಣ್ಣದಾಗುತ್ತಾ ಹೋಗಿ ಸೂರ್ಯ ಆ ಕಾಲ್ಪನಿಕ ಬಿಂದುವಿಗೆ ತಲುಪುತಿದ್ದಂತೆ ಉಂಟಾಗುವ ಶೂನ್ಯ ನೆರಳಿನಿಂದಾಗಿ, ಕೊರೆದ ಆಕಾರದಿಂದ ಬಂದ ಸೂರ್ಯಕಿರಣಗಳು ಅದೇ ಆಕಾರದಲ್ಲಿ ಗೋಚರಿಸುತ್ತವೆ. ಇದಕ್ಕಾಗಿ ಶುಭಶ್ರೀ ಬಳಸಿಕೊಂಡ ಶಬ್ದ ‘ಗೋ ಕೊರೋನ’. ಬಿಕ್ಕಟ್ಟಿನ ಇಂದಿನ ದಿನಗಳಲ್ಲಿ ಜೀವನಸ್ಪೂರ್ತಿ ಹೆಚ್ಚಿಸುವ ರೀತಿಯಲ್ಲಿ ಆಕೆ ವಿಜ್ಞಾನವನ್ನು ಬಳಸಿಕೊಂಡಿರುವುದು ಎಲ್ಲರ ಮೆಚ್ಚುಗೆ ಗಳಿಸಿತು.
ಅದೇ ರೀತಿ ಭೌತಶಾಸ್ತ್ರ ಪ್ರಾಧ್ಯಾಪಕಿ ಬ್ರಹ್ಮಾವರದ ದಿವ್ಯ ವಸಂತ ಕುಮಾರ್, ಬಿಎಸ್ಸಿ ವಿದ್ಯಾರ್ಥಿಗಳಾದ ಕೋಟದ ವರುಣಿ, ಕುಂದಾಪುರ ಬೀಜಾಡಿಯ ವರಲಕ್ಷ್ಮೀ ಅವರು ವಿವಿಧ ಸಾಧನಗಳನ್ನು ಬಳಸಿ ಶೂನ್ಯ ನೆರಳಿನ ಪ್ರಕ್ರಿಯೆಯನ್ನು ವೀಕ್ಷಿಸಿ, ಕುತೂಹಲಿಗರಿಗೂ ಅದನ್ನು ತೋರಿಸಿ ಖುಷಿ ಪಟ್ಟರು.









