ಮೃತರ ಅಂತ್ಯ ಸಂಸ್ಕಾರಕ್ಕೆ ಅಡ್ಡಿ: ಕಾನೂನು ಕ್ರಮಕ್ಕೆ ಎಸ್‌ಡಿಪಿಐ ಆಗ್ರಹ
ಮಂಗಳೂರು, ಎ.25: ಕೊರೋನ ಪೀಡಿತೆಯ ಮೃತದೇಹದ ಅಂತ್ಯಸಂಸ್ಕಾರಕ್ಕೆ ಪಚ್ಚನಾಡಿಯ ಹಿಂದೂ ರುದ್ರಭೂಮಿಯಲ್ಲಿ ನೆರವೇರಿಸಲು ಅವಕಾಶ ನೀಡದೆ ಅಡ್ಡಿಪಡಿಸಿದ ಆರೋಪದಲ್ಲಿ ಶಾಸಕ ಡಾ. ಭರತ್ ಶೆಟ್ಟಿಯ ವಿರುದ್ಧ ದ.ಕ.ಜಿಲ್ಲಾಡಳಿತ ಕಾನೂನು ಕ್ರಮ ಜರುಗಿಸಬೇಕು ಎಂದು ದ.ಕ.ಜಿಲ್ಲಾ ಎಸ್‌ಡಿಪಿಐ ಆಗ್ರಹಿಸಿದೆ.
ಯಾರೇ ಮೃತಪಟ್ಟರೂ ಅಂತ್ಯ ಸಂಸ್ಕಾರ ನಡೆಯುವಂತಹ ಸಂದರ್ಭ ಮೃತದೇಹಕ್ಕೆ ಗೌರವ ನೀಡಿ ಮಾನವೀಯ ನೆಲೆಯಲ್ಲಿ ಅದಕ್ಕೆ ಅವಕಾಶ ಮಾಡಿಕೊಡಬೇಕಾದದ್ದು ಎಲ್ಲರ ಜವಾಬ್ದಾರಿಯಾಗಿದೆ. ಈ ಸೋಂಕಿನಿಂದ ಮೃತಪಟ್ಟ ದೇಹವನ್ನು ದಹನ ಮಾಡಿದರೆ ಅಥವಾ ಮಣ್ಣಿನಲ್ಲಿ ವೈಜ್ಞಾನಿಕ ರೀತಿಯಲ್ಲಿ ಹೂತರೆ ಯಾವುದೇ ಸಮಸ್ಯೆ ಯಾಗುವುದಿಲ್ಲವೆಂದು ವಿಶ್ವ ಆರೋಗ್ಯ ಸಂಸ್ಥೆಯ ಹೇಳಿಕೆಯನ್ನು ಆಧಾರವಾಗಿಟ್ಟುಕೊಂಡು ಕೇಂದ್ರ ಸರಕಾರ ಕೂಡ ಪುನರುಚ್ಚರಿಸಿದೆ. ಇದನ್ನು ಜನರಿಗೆ ಹೇಳಿ ಮನದಟ್ಟು ಮಾಡಬೇಕಾದ ಶಾಸಕರೇ ಅಡ್ಡಿಪಡಿಸಿರುವುದು ಖಂಡನೀಯ.
ಹಾಗಾಗಿ ಅಂತ್ಯಸಂಸ್ಕಾರಕ್ಕೆ ಅಡ್ಡಿಪಡಿಸಿದ ಸಂಘಪರಿವಾರದವರ ವಿರುದ್ಧ ಕೇಸು ದಾಖಲಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಎಸ್‌ಡಿಪಿಐ ಜಿಲ್ಲಾ ಉಪಾಧ್ಯಕ್ಷ ಆಂಟನಿ ಪಿಡಿ ಆಗ್ರಹಿಸಿದ್ದಾರೆ.





