ಆನ್ಲೈನ್ನಲ್ಲಿ ಅತೀ ಅಗತ್ಯದ ವಸ್ತು ಮಾತ್ರ ಮಾರಲು ಅವಕಾಶ: ಗೃಹ ಇಲಾಖೆಯ ಸ್ಪಷ್ಟನೆ
ಹೊಸದಿಲ್ಲಿ, ಎ.25: ಲಾಕ್ಡೌನ್ ಅವಧಿಯಲ್ಲಿ ಇ-ಕಾಮರ್ಸ್ ವೇದಿಕೆ(ಆನ್ಲೈನ್ ವ್ಯವಹಾರ)ಯ ಮೂಲಕ ಅತ್ಯಗತ್ಯವಲ್ಲದ ಸರಕುಗಳ ಮಾರಾಟಕ್ಕೆ ನಿಷೇಧ ಮುಂದುವರಿದಿದ್ದು, ಅತೀ ಅಗತ್ಯದ ಸರಕುಗಳ ಮಾರಾಟಕ್ಕೆ ಮಾತ್ರ ಅವಕಾಶವಿದೆ ಎಂದು ಕೇಂದ್ರ ಗೃಹ ಇಲಾಖೆ ಸ್ಪಷ್ಟಪಡಿಸಿದೆ.
ಆದರೆ ಇ-ಕಾಮರ್ಸ್ ವೆಬ್ಸೈಟ್ಗಳ ಬಗ್ಗೆ ಸರಕಾರ ಉಲ್ಲೇಖಿಸಿಲ್ಲ. ರಾಷ್ಟ್ರವ್ಯಾಪಿ ಲಾಕ್ಡೌನ್ ಜಾರಿಗೊಳಿಸಿದ ಬಳಿಕ, ದಿನಸಿ ಸಾಮಾಗ್ರಿ, ತರಕಾರಿ ಮತ್ತು ಔಷಧ ಮಾರಾಟ ಸಂಸ್ಥೆಗಳ ಕಾರ್ಯನಿರ್ವಹಣೆಗೆ ಅವಕಾಶ ನೀಡಲಾಗಿತ್ತು. ಬಳಿಕ ಕಳೆದ ವಾರ ಕೆಲವು ರಿಯಾಯಿತಿ ಘೋಷಿಸಿದ್ದ ಕೇಂದ್ರ ಸರಕಾರ, ಮೊಬೈಲ್ ಫೋನ್, ರೆಫ್ರಿಜರೇಟರ್ಗಳು, ಬಟ್ಟೆ, ಟಿವಿ, ಲ್ಯಾಪ್ಟಾಪ್ ಇತ್ಯಾದಿ ಅತೀ ಅಗತ್ಯವಲ್ಲದ ಸರಕುಗಳನ್ನೂ ಆನ್ಲೈನ್ನಲ್ಲಿ ಮಾರಾಟ ಮಾಡಬಹುದು ಎಂದು ತಿಳಿಸಿತ್ತು. ಆದರೆ ಸರಕಾರದ ನಿರ್ಧಾರಕ್ಕೆ ಭಾರತದ ವ್ಯಾಪಾರಸ್ತರ ಮಹಾಒಕ್ಕೂಟ (ಸಿಎಐಟಿ) ತೀವ್ರ ವಿರೋಧ ಸೂಚಿಸಿತ್ತು.
ಆನ್ಲೈನ್ನಲ್ಲಿ ಅತ್ಯಗತ್ಯದ ವಸ್ತುಗಳ ಮಾರಾಟಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೆ ಅತ್ಯಗತ್ಯವಲ್ಲದ ವಸ್ತುಗಳನ್ನೂ ಮಾರಬಹುದಾದರೆ ವ್ಯಾಪಾರಿಗಳಿಗೂ ಅವಕಾಶ ಮಾಡಿಕೊಡಬೇಕು ಎಂದು ಸಿಎಐಟಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ಆಗ್ರಹಿಸಿದ್ದರು. ಮರುದಿನವೇ ಸ್ಪಷ್ಟನೆ ನೀಡಿದ್ದ ಕೇಂದ್ರ ಸರಕಾರ, ಕೇವಲ ಅಗತ್ಯದ ವಸ್ತುಗಳನ್ನು ಮಾರಾಟ ಮಾಡುವ ಇ-ಕಾಮರ್ಸ್ ಸಂಸ್ಥೆಗಳ ಡೆಲಿವರಿ ಏಜೆಂಟ್ಗಳು ಆಯಾ ರಾಜ್ಯ ಸರಕಾರಗಳ ಅನುಮತಿ ಪಡೆದು ಕಾರ್ಯನಿರ್ವಹಿಸಬಹುದು ಎಂದು ತಿಳಿಸಿತ್ತು.