ಕೊರೋನ ಸೋಂಕಿತ ಮೃತ ಮಹಿಳೆಯ ಅಂತಿಮ ಸಂಸ್ಕಾರ ಪ್ರಕರಣ: ಜಿಲ್ಲಾಧಿಕಾರಿಗೆ ಹೀಗೊಂದು ಪತ್ರ !
ಮಂಗಳೂರು, ಎ.25: ಕೊರೋನ ಸೋಂಕಿನಿಂದ ಮೃತಪಟ್ಟ ವೃದ್ಧೆಯೊಬ್ಬರ ಅಂತಿಮಸಂಸ್ಕಾರಕ್ಕೆ ಸಂಬಂಧಿಸಿ ಉಂಟಾದ ಗೊಂದಲದ ಬೆನ್ನಲ್ಲೇ, ಇದೀಗ ಕಾಟಿಪಳ್ಳ- ಗಣೇಶಪುರದ ಹಿಂದೂ ರುದ್ರಭೂಮಿ ನವೀಕರಣ ಮತ್ತು ಅಭಿವೃದ್ಧಿ ಸಮಿತಿ ದ.ಕ. ಜಿಲ್ಲಾಧಿಕಾರಿಗೆ ಪತ್ರ ಬರೆದು ಹೀಗೊಂದು ಮನವಿ ಸಲ್ಲಿಸಿದೆ.
ಕೊರೋನ ಪೀಡಿತರಾಗಿ ಮೃತರಾಗುವ ಹಿಂದೂ ಧರ್ಮದವರಿಗೆ ನಮ್ಮ ನಿರ್ವಹಣೆಯಲ್ಲಿರುವ ಕಾಟಿಪಳ್ಳ ಹಿಂದೂ ರುದ್ರಭೂಮಿಯಲ್ಲಿ ಅಂತಿಮ ಸಂಸ್ಕಾರ ನಡೆಸಲು ಅವಕಾಶ ನೀಡುವುಾಗಿ ಸಮಿತಿ ತನ್ನ ಪತ್ರದಲ್ಲಿ ತಿಳಿಸಿದೆ.
ಕೋವಿಡ್ 19ರ ಸಂಧಿಗ್ದ ಪರಿಸ್ಥಿತಿಯಲ್ಲಿ ದುರದೃಷ್ಟವಶಾತ್ ಸಾವನ್ನಪ್ಪಿದವರ ಮೃತದೇಹ ದಹನದ ಕುರಿತಂತೆ ಇತ್ತೀಚೆಗೆ ಕೆಲ ಕಡೆ ಗೊಂದಲ ನಿರ್ಮಾಣವಾಗಿರುವುದು ಖೇದಕರ. ತಜ್ಞ ವೈದ್ಯರ ಸಲಹೆಯಿದ್ದರೂ ವಿರೋಧ, ಪ್ರತಿಭಟನೆ ದುಖದ ಸಂಗತಿ. ಇದನ್ನು ಮನಗಂಡ ನಮ್ಮ ಸಮಿತಿಯು ಮಂಗಳೂರು ನಗರದಿಂದ 20 ಕಿ.ಮೀ. ಅಂತರದಲ್ಲಿರುವ ಕಾಟಿಪಳ್ಳದ 3ನೆ ಬ್ಲಾಕ್‌ನ ಮನಪಾ ಅಧೀನ ಮತ್ತು ನಮ್ಮ ಸಮಿತಿ ನಿರ್ವಹಣೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಅಂತಿಮ ಸಂಸ್ಕಾರಕ್ಕೆ ಅವಕಾಶ ನೀಡುತ್ತೇವೆ ಎಂದು ಸಮಿತಿಯ ಸಂಚಾಲಕರು ಜಿಲ್ಲಾಧಿಕಾರಿಗೆ ಮೇಲ್ ಮೂಲಕ ಸಲ್ಲಿಸಿರುವ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.





