ಕಲಬುರಗಿ: ಇದುವರೆಗೆ ಒಟ್ಟು 6 ಮಂದಿ ಕೊರೋನ ಸೋಂಕಿನಿಂದ ಗುಣಮುಖ

ಸಾಂದರ್ಭಿಕ ಚಿತ್ರ
ಕಲಬುರಗಿ, ಎ.25: ಕಲಬುರಗಿ ಜಿಲ್ಲೆಯಲ್ಲಿ ಕೊರೋನ ವೈರಸ್ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಇಬ್ಬರು ವೃದ್ಧೆಯರೂ ಸೇರಿ ಮೂವರು ಮಹಿಳೆಯರು ಗುಣಮುಖರಾಗಿ ಆಸ್ಪತ್ರೆಯಿಂದ ಶನಿವಾರ ಬಿಡುಗಡೆ ಆಗಿದ್ದಾರೆ.
ನಗರದ 72 ವರ್ಷದ ಅಜ್ಜಿ ಕೊರೋನ ಸೋಂಕು ವಿರುದ್ಧದ ಹೋರಾಟದಲ್ಲಿ ಗೆದ್ದು ಬಂದರೆ, ಇವರ ಹಿಂದೆಯೇ ಆಸ್ಪತ್ರೆಗೆ ಸೇರಿದ್ದ ಶಹಾಬಾದ್ ಪಟ್ಟಣದ 60 ವರ್ಷದ ವೃದ್ಧೆ ಹಾಗೂ 28 ವರ್ಷದ ಗೃಹಿಣಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.
ದೇಶದಾದ್ಯಂತ ಕೊರೋನ ಸೋಂಕಿನಿಂದ ಮೃತಪಟ್ಟವರಲ್ಲಿ ಬಹುಪಾಲು ಮಂದಿ ಹಿರಿಯ ನಾಗರಿಕರೇ ಆಗಿದ್ದಾರೆ. ಇದಕ್ಕೆ ತಕ್ಕ ಉದಾಹರಣೆ ಎಂಬಂತೆ ಕಲಬುರಗಿ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಮೃತಪಟ್ಟ ನಾಲ್ವರೂ 60 ವರ್ಷ ಮೇಲ್ಪಟ್ಟವರೆ ಆಗಿದ್ದಾರೆ.
ಜಿಲ್ಲೆಯಲ್ಲಿ ಇಲ್ಲಿಯವರೆಗೆ 36 ಜನರಿಗೆ ಕೊರೋನ ವೈರಸ್ ಸೋಂಕು ದೃಢಪಟ್ಟಿದೆ. ಇದರಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಈ ಹಿಂದೆಯೇ ಮೂವರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಈಗ ಮತ್ತೆ ಮೂವರು ಸೇರಿ ಗುಣಮುಖರಾದವರ ಸಂಖ್ಯೆ 6ಕ್ಕೆ ಏರಿಕೆ ಆಗಿದೆ.





