ಕಾಲೇಜ್ ತರಗತಿಗಳನ್ನು ಸೆಪ್ಟೆಂಬರ್ನಲ್ಲಿ ಆರಂಭಿಸಲು ಯುಜಿಸಿ ಶಿಫಾರಸು
ಸಾಧ್ಯವಿರುವಲ್ಲಿ ಪ್ರವೇಶ ಪರೀಕ್ಷೆಗಳನ್ನು ಆನ್ಲೈನ್ನಲ್ಲಿ ನಡೆಸಲು ಸಲಹೆ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ,ಎ.25: ಕೊರೋನ ವೈರಸ್ ಹಾವಳಿಯ ಹಿನ್ನೆಲೆಯಲ್ಲಿ ಕಾಲೇಜು ತರಗತಿಗಳನ್ನು ಜುಲೈ ತಿಂಗಳ ಬದಲಿಗೆ ಸೆಪ್ಟೆಂಬರ್ನಲ್ಲಿ ಆರಂಭಿಸಬೇಕೆಂದು ವಿಶ್ವವಿದ್ಯಾನಿಲಯ ಅನುದಾನ ಆಯೋಗ (ಯುಜಿಸಿ) ಶನಿವಾರ ಶಿಫಾರಸು ಮಾಡಿದೆ. ಸಾಧ್ಯವಿರುವಲ್ಲಿ ಆನ್ಲೈನ್ ಮೂಲಕ ಪ್ರವೇಶ ಪರೀಕ್ಷೆಗಳನ್ನು ನಡೆಸುವಂತೆ ಅದು ಸೂಚಿಸಿದೆ.
ಕೊರೋನ ವೈರಸ್ ಹರಡುವಿಕೆಯನ್ನು ತಡೆಯಲು ದೇಶಾದ್ಯಂತ ಲಾಕ್ಡೌನ್ ಹೇರಿರುವುದರಿಂದ ಶೈಕ್ಷಣಿಕ ರಂಗಕ್ಕೆ ಆಗಿರುವ ನಷ್ಟ ಹಾಗೂ ಆನ್ಲೈನ್ ಪರೀಕ್ಷೆ ಈ ಎರಡು ವಿಷಯಗಳ ಬಗ್ಗೆ ಪರಿಶೀಲನೆ ನಡೆಸಲು ಯುಜಿಸಿಯು ಎರಡು ಸಮಿತಿಗಳನ್ನು ನೇಮಿಸಿತ್ತು.
ಲಾಕ್ಡೌನ್ ನಡುವೆ ವಿಶ್ವವಿದ್ಯಾನಿಲಯಗಳಲ್ಲಿ ಪರೀಕ್ಷೆಗಳನ್ನು ನಡೆಸುವ ಬಗ್ಗೆ ಪರಿಶೀಲಿಸಲು ಹರ್ಯಾಣ ವಿವಿಯ ಉಪರಕುಲಪತಿ ಆರ್.ಸಿ. ಕುಹಾಡ್ ಅವವ ನೇತೃತ್ವದಲ್ಲಿ ಸಮಿತಿ ರಚನೆಯಾಗಿತ್ತು.
ಆನ್ಲೈನ್ ಶಿಕ್ಷಣವನ್ನು ಸುಧಾರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳವುದಕ್ಕಾಗಿ ಸಲಹೆಗಳನ್ನು ನೀಡಲು ಯುಜಿಸಿಯು ಇಂದಿರಾಗಾಂಧಿ ಮುಕ್ತ ವಿವಿಯ ಉಪ ಕುಲಪತಿ ನಾಗೇಶ್ವರರಾವ್ ನೇತೃತ್ವದಲ್ಲಿ ಸಮಿತಿಯನ್ನು ನೇಮಿಸಲಾಗಿತ್ತು. ಇವೆರಡೂ ಸಮಿತಿಗಳು ಶುಕ್ರವಾರ ತಮ್ಮ ವರದಿಗಳನ್ನು ಸಲ್ಲಿಸಿದ್ದವು.
ಶೈಕ್ಷಣಿಕ ತರಗತಿಗಳನ್ನು ಜುಲೈ ತಿಂಗಳ ಬದಲಾಗಿ ಸೆಪ್ಟೆಂಬರ್ನಲ್ಲಿ ಆರಂಭಿಸಬೇಕೆಂದು ಒಂದನೇ ಸಮಿತಿ ಶಿಫಾಸು ಮಾಡಿದೆ. ಎರಡನೆ ಸಮಿತಿಯು ವಿವಿಗಳು ಮೂಲಭೂತ ಸೌಕರ್ಯಗಳು ಹಾಗೂ ಸಾಧನಗಳನ್ನು ಹೊಂದಿದ್ದಲ್ಲಿ ಮಾತ್ರವೇ ಆನ್ಲೈನ್ ಪರೀಕ್ಷೆಗಳನ್ನು ನಡೆಸಬಹುದಾಗಿದೆ ಅಥವಾ ಲಾಕ್ಡೌನ್ ಮುಗಿಯುವರೆಗೆ ಕಾದು ನಿಂತು, ಆನಂತರ ಪೆನ್ ಹಾಗೂ ಕಾಗದ ರೂಪದ ಪರೀಕ್ಷೆಗಳನ್ನು ನಡೆಸಬಹುದು ಎಂದು ಶಿಫಾರಸು ಮಾಡಿರುವುದಾಗಿ ಮೂಲಗಳು ತಿಳಿಸವೆ.
ಈ ಎರಡೂ ವರದಿಗಳನ್ನು ಮಾನವಸಂಪನ್ಮೂಲ ಸಚಿವಾಲಯವು ಅಧ್ಯಯನ ಮಾಡುತ್ತಿದೆ ಹಾಗೂ ಈ ಬಗ್ಗೆ ಮುಂದಿನ ವಾರದೊಳಗೆ ಅಧಿಕೃತ ಮಾರ್ಗಸೂಚಿಗಳ ಅಧಿಸೂಚನೆಯನ್ನು ಹೊರಡಿಸುವ ನಿರೀಕ್ಷೆಯಿದೆ.
ಆದಾಗ್ಯೂ ಆದರೆ ಈ ಎಲ್ಲಾ ಶಿಫಾರಸುಗಳನ್ನು ಸ್ವೀಕರಿಸಬೇಕೆಂದೇನಿಲ್ಲ.ಶಿಫಾರಸುಗಳ ಕಾರ್ಯಸಾಧ್ಯತೆಗಳ ಬಗ್ಗೆ ಸಮಾಲೋಚನೆ ನಡೆಸಿ ಮಾರ್ಗದರ್ಶಿ ಸೂತ್ರಗಳನ್ನು ಹೊರಡಿಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.







