ತಬ್ಲೀಗಿಗಳಿಗೆ ಆಶ್ರಯ ನೀಡಿದ್ದ ಆರೋಪದಲ್ಲಿ ಬಂಧಿತ ಅಲಹಾಬಾದ್ ವಿವಿ ಪ್ರೊಫೆಸರ್ ಅಮಾನತು

ಹೊಸದಿಲ್ಲಿ,ಎ.25: ತಬ್ಲೀಗಿ ಜಮಾಅತ್‌ನ ಸಮಾವೇಶದಲ್ಲಿ ಪಾಲ್ಗೊಂಡಿದ್ದವರಿಗೆ ಆಶ್ರಯ ನೀಡಿದ್ದ ಆರೋಪದಲ್ಲಿ ಬಂಧಿಸಲ್ಪಟ್ಟಿರುವ ಅಲಹಾಬಾದ್ ವಿವಿಯ ರಾಜಕೀಯ ವಿಜ್ಞಾನ ಬೋಧಕ ಮುಹಮ್ಮದ್ ಶಾಹಿದ್ (55) ಅವರನ್ನು ಶುಕ್ರವಾರ ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಪ್ರೊ.ಮುಹಮ್ಮದ್ ಶಾಹಿದ್ ಅವರನ್ನು ಅಮಾನತುಗೊಳಿಸಿ ವಿವಿಯ ಕುಲಪತಿ ಆರ್.ಆರ್.ತಿವಾರಿ ಅವರು ಆದೇಶಿಸಿದ್ದಾರೆ ಎಂದು ವಿವಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಶೈಲೇಂದ್ರ ಮಿಶ್ರಾ ತಿಳಿಸಿದರು.
ಮಂಗಳವಾರ ಪ್ರಯಾಗರಾಜ್ ಪೊಲೀಸರು ಶಾಹಿದ್ ಮತ್ತು 16 ವಿದೇಶಿ ಪ್ರಜೆಗಳು ಸೇರಿದಂತೆ 30 ಜನರನ್ನು ಇಲ್ಲಿಯ ಶಿಬಿರವೊಂದರಲ್ಲಿ ಅವರ 14 ದಿನಗಳ ಕಡ್ಡಾಯ ಕ್ವಾರಂಟೈನ್ ಅವಧಿ ಅಂತ್ಯಗೊಂಡ ಬಳಿಕ ಬಂಧಿಸಿದ್ದರು.
ಶಾಹಿದ್ ಅವರು ಲಾಕ್‌ಡೌನ್ ನಿರ್ಬಂಧಗಳ ಹೊರತಾಗಿಯೂ ಕಳೆದ ತಿಂಗಳು ದಿಲ್ಲಿಯಲ್ಲಿ ನಡೆದಿದ್ದ ಸಮಾವೇಶದಲ್ಲಿ ತಾನು ಪಾಲ್ಗೊಂಡಿದ್ದನ್ನು ಬಚ್ಚಿಟ್ಟಿದ್ದರು ಮತ್ತು ಏಳು ಇಂಡೋನೇಷ್ಯಾ ಪ್ರಜೆಗಳಿಗೆ ಪ್ರಯಾಗರಾಜ್‌ನ ಮಸೀದಿಯೊಂದರಲ್ಲಿ ವಸತಿ ವ್ಯವಸ್ಥೆಯನ್ನು ಕಲ್ಪಿಸಿದ್ದರು. ಅವರ ವಾಸ್ತವ್ಯದ ಬಗ್ಗೆ ಶಾಹಿದ್ ಜಿಲ್ಲಾಡಳಿತಕ್ಕೂ ತಿಳಿಸಿರಲಿಲ್ಲ ಎಂದು ಪೊಲೀಸರು ಆರೋಪಿಸಿದ್ದಾರೆ.
ಸ್ಥಳೀಯ ನ್ಯಾಯಾಲಯವು ಎಲ್ಲ 30 ಬಂಧಿತರಿಗೆ ನ್ಯಾಯಾಂಗ ಬಂಧನವನ್ನು ವಿಧಿಸಿದ್ದು,ಅವರನ್ನು ತಾತ್ಕಾಲಿಕ ಜೈಲೊಂದರಲ್ಲಿ ಇರಿಸಲಾಗಿದೆ.
ಶಾಹಿದ್ ಅವರು 48 ಗಂಟೆಗಳಿಗೂ ಹೆಚ್ಚಿನ ಅವಧಿಗೆ ನ್ಯಾಯಾಂಗ ಬಂಧನದಲ್ಲಿರುವುದರಿಂದ ನಿಯಮಗಳಂತೆ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಅಮಾನತಿನ ಅವಧಿಯಲ್ಲಿ ಕೇಂದ್ರ ಸರಕಾರದ ಮಾರ್ಗಸೂಚಿಗಳಂತೆ ಅವರಿಗೆ ಜೀವನಾಧಾರ ವೇತನವನ್ನು ನೀಡಲಾಗುವುದು ಎಂದು ಮಿಶ್ರಾ ತಿಳಿಸಿದರು.







