ಬಂಟ್ವಾಳ: ವಲಸೆ ಕಾರ್ಮಿಕರು ಊರುಗಳಿಗೆ ತೆರಳುವ ಕಾರ್ಯಕ್ಕೆ ಚಾಲನೆ
ಬಂಟ್ವಾಳ : ತಾಲೂಕಿನ ನಾನಾ ಕಡೆಗಳಲ್ಲಿ ಗ್ರಾಮ ಪಂ. ಸುಪರ್ದಿಯಲ್ಲಿ ಸುಮಾರು 600ಕ್ಕೂ ಅಧಿಕ ವಲಸೆ ಕಾರ್ಮಿಕರು ಅವರವರ ಊರುಗಳಿಗೆ ತೆರಳುವ ಕಾರ್ಯ ಶನಿವಾರ ರಾತ್ರಿ ನಡೆಯಿತು.
ಜಿಲ್ಲಾಡಳಿತ ಸೂಚನೆಯಂತೆ ಈ ಕಾರ್ಯ ನಡೆಯುತ್ತಿದ್ದು, ಪ್ರತಿ ತಾಲೂಕುಗಳಿಂದಲೂ ಕಾರ್ಮಿಕರನ್ನು ಅವರ ತವರು ಪ್ರದೇಶಗಳಿಗೆ ಕಳುಹಿಸಲಾಗುತ್ತಿದೆ. ಅದರಂತೆ ಬಂಟ್ವಾಳದಲ್ಲೂ ಶನಿವಾರ ತಾಲೂಕು ಪಂ. ಮತ್ತು ತಾಲೂಕಾಡಳಿತವು ಪ್ರತಿ ಗ್ರಾಪಂಗಳಲ್ಲಿರುವ ವಲಸೆ ಕಾರ್ಮಿಕರ ಪಟ್ಟಿಯನ್ನು ಮಾಡಿ, ಆಯಾ ಗ್ರಾಪಂ ವ್ಯಾಪ್ತಿಯಲ್ಲಿ ಆರೋಗ್ಯ ತಪಾಸಣೆಯನ್ನು ಕೈಗೊಂಡು, ಅವರಿಗೆ ಪೂರಕವಾಗಿ ಬೇಕಾದ ವ್ಯವಸ್ಥೆಗಳನ್ನು ಸರ್ಕಾರದ ವತಿಯಿಂದ ಕಲ್ಪಿಸಲಾಯಿತು.
ಬಿಜಾಪುರ, ಬಾಗಲಕೋಟೆ, ರಾಯಚೂರು, ಗದಗ ಮೊದಲಾದ ಪ್ರದೇಶಗಳಿಗೆ ತೆರಳುವ ವಲಸೆಕಾರ್ಮಿಕರಿಗೆ ಕೆಎಸ್ಸಾರ್ಟಿಸಿ ಬಿ.ಸಿ.ರೋಡ್ ಬಸ್ ನಿಲ್ದಾಣದಿಂದ ಸುಮಾರು 25ಕ್ಕೂ ಅಧಿಕ ಬಸ್ಸುಗಳ ವ್ಯವಸ್ಥೆ ಮಾಡಲಾಗಿದ್ದು, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಪರಿಶೀಲನೆ ನಡೆಸಿದರು. ಈ ಸಂದರ್ಭ ಸಹಾಯಕ ಕಮೀಷನರ್ ಮದನ್ ಮೋಹನ್, ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್.ಆರ್, ತಾಲೂಕು ಪಂ. ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಬುಡಾ ಅಧ್ಯಕ್ಷ ದೇವದಾಸ ಶೆಟ್ಟಿ, ಕಂದಾಯ ಇಲಾಖೆಯ ಆರ್.ಐ. ಗಳಾದ ರಾಮ ಕಾಟಿಪಳ್ಳ, ದಿವಾಕರ್, ನವೀನ್, ಕೆಎಸ್ಸಾರ್ಟಿಸಿ ಅಧಿಕಾರಿಗಳ ಸಹಿತ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದು, ಕಾರ್ಮಿಕರಿಗೆ ಸರ್ಕಾರದ ನಿರ್ದೇಶನದ ಪ್ರಕಾರ ಕಳುಹಿಸುವ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.







