ಕಳೆದ ವರ್ಷ ಸುಂದರ ಪಿಚೈಗೆ 2,144 ಕೋಟಿ ರೂ. ವೇತನ

ವಾಶಿಂಗ್ಟನ್, ಎ. 25: ಗೂಗಲ್ ಮತ್ತು ಅದರ ಮಾತೃ ಸಂಸ್ಥೆ ಆಲ್ಫಾಬೆಟ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುಂದರ್ ಪಿಚೈಗೆ 2019ರಲ್ಲಿ ವೇತನ ಮತ್ತು ಭತ್ತೆಯ ರೂಪದಲ್ಲಿ 281 ಮಿಲಿಯ ಡಾಲರ್ (ಸುಮಾರು 2,144 ಕೋಟಿ ರೂಪಾಯಿ) ನೀಡಲಾಗಿದೆ ಎಂದು ಆಲ್ಫಾಬೆಟ್ ಇಂಕ್ ಸರಕಾರಕ್ಕೆ ಸಲ್ಲಿಸಿದ ದಾಖಲೆಯೊಂದರಲ್ಲಿ ತಿಳಿಸಿದೆ.
ಈ ಮೂಲಕ, ಪಿಚೈ ಜಗತ್ತಿನ ಅತಿ ಹೆಚ್ಚು ಸಂಭಾವನೆ ಪಡೆಯುವವರ ಪೈಕಿ ಒಬ್ಬರಾಗಿದ್ದಾರೆ. ಈ ಸಂಭಾವನೆಯ ಹೆಚ್ಚಿನ ಭಾಗವು ಶೇರುಗಳ ರೂಪದಲ್ಲಿದೆ.
2019ರಲ್ಲಿ ಪಿಚೈರ ವಾರ್ಷಿಕ ವೇತನವು 6,50,000 ಡಾಲರ್ (ಸುಮಾರು 4.96 ಕೋಟಿ ರೂಪಾಯಿ) ಆಗಿತ್ತು. ಅವರ ವೇತನವು ಈ ವರ್ಷ 2 ಮಿಲಿಯ ಡಾಲರ್ (ಸುಮಾರು 1,526 ಕೋಟಿ ರೂಪಾಯಿ) ಆಗಲಿದೆ ಎಂದು ಕಂಪೆನಿ ತಿಳಿಸಿದೆ.
ಆಲ್ಫಾಬೆಟ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಪಿಚೈ ಕಳೆದ ವರ್ಷದ ಕೊನೆಯಲ್ಲಿ ಕಂಪೆನಿಯ ಸ್ಥಾಪಕ ಲ್ಯಾರಿ ಪೇಜ್‌ರಿಂದ ವಹಿಸಿಕೊಂಡಿದ್ದಾರೆ.
Next Story





