ಸಿದ್ದರಾಮಯ್ಯ ಅಭಿಮಾನಿಗಳಿಂದ ಗೋವಾದಲ್ಲಿರುವ ಕನ್ನಡಿಗರಿಗೆ ಆಹಾರ ಧಾನ್ಯಗಳ ಕಿಟ್ ರವಾನೆ
ಬಾಗಲಕೋಟೆ, ಎ.25: ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನಿಂದ ಗೋವಾ ರಾಜ್ಯಕ್ಕೆ ಹೋಗಿದ್ದ ವಲಸೆ ಕಾರ್ಮಿಕರಿಗೆ ಮಾಜಿ ಮುಖ್ಯಮಂತ್ರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಭಿಮಾನಿಗಳು ಆಹಾರ ಧಾನ್ಯಗಳ ಕಿಟ್‍ಗಳನ್ನು ಕಳುಹಿಸಿಕೊಟ್ಟಿದ್ದಾರೆ.
ಗೋವಾದಲ್ಲಿ ದಿನಗೂಲಿ ಕೆಲಸ ಮಾಡುತ್ತಿರುವ ಬಾದಾಮಿ ತಾಲೂಕಿನ ಒಂದು ಸಾವಿರ ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್‍ಗಳನ್ನು ಕಳುಹಿಸಿಕೊಡಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್‍ಗಳನ್ನು ಕಳುಹಿಸಿಕೊಡಲಾಗುವುದು ಎಂದು ಸಿದ್ದರಾಮಯ್ಯ ಅವರ ಅಭಿಮಾನಿಗಳು ತಿಳಿಸಿದ್ದಾರೆ.
ಪ್ರತಿ ಕಿಟ್‍ನಲ್ಲಿ ಎರಡು ಕೆ.ಜಿ ಗೋಧಿ ಹಿಟ್ಟು, ಎರಡು ಕೆ.ಜಿ ಜೋಳ, ಒಂದು ಕೆ.ಜಿ ಬೇಳೆ, ಒಂದು ಕೆ.ಜಿ ಅಡುಗೆ ಎಣ್ಣೆ, ಒಂದು ಕೆ.ಜಿ ಸಕ್ಕರೆ, ಒಂದು ಕೆ.ಜಿ ರವೆ, ಒಂದು ಕೆ.ಜಿ ಅಕ್ಕಿ, ಅರ್ಧ ಕೆ.ಜಿ ಹುರಳಿಕಾಳು, ಎರಡು ಕೆ.ಜಿ ಈರುಳ್ಳಿ, ಎರಡು ಕೆ.ಜಿ ಹಸಿಮೆಣಸಿನಕಾಯಿ, ಎರಡು ಸಾಬೂನು ಸೇರಿ ಒಟ್ಟು ಹನ್ನೊಂದು ಪದಾರ್ಥಗಳನ್ನು ಇರಿಸಿ, ಗೋವಾಕ್ಕೆ ಕಳುಹಿಸಿ ಕೊಟ್ಟಿದ್ದಾರೆ.
ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಅವರ ಅಭಿಮಾನಿಗಳು ಈ ಆಹಾರ ಧಾನ್ಯಗಳ ಕಿಟ್‍ಗಳನ್ನು ತಯಾರಿಸಿ, ಒಂದು ಕಡೆಗೆ ಶೇಖರಣೆ ಮಾಡಿಟ್ಟಿದ್ದರು. ಶನಿವಾರ ಸೂಕ್ತ ಸಮಯ ಸಿಕ್ಕ ಹಿನ್ನೆಲೆಯಲ್ಲಿ ಎಲ್ಲ ಕಿಟ್‍ಗಳನ್ನೂ ಗೋವಾಕ್ಕೆ ಕಳುಹಿಸಿಕೊಟ್ಟಿದ್ದಾರೆ.
ಬಾದಾಮಿ ತಾಲೂಕಿನಿಂದ ನೂರಾರು ಕುಟುಂಬಗಳು ಗೋವಾಕ್ಕೆ ವಲಸೆ ಹೋಗಿದ್ದಾರೆ. ಸದ್ಯ ಲಾಕ್‍ಡೌನ್ ಜಾರಿಯಾಗಿದ್ದು, ಅವರಿಗೆ ಅಲ್ಲಿ ಯಾವುದೇ ಕೆಲಸವಿಲ್ಲದಂತಾಗಿದೆ. ಹೀಗಾಗಿ, ಇಲ್ಲಿಂದ ಆಹಾರ ಧಾನ್ಯಗಳ ಕಿಟ್‍ಗಳನ್ನು ಕಳುಹಿಸಿದರೆ ಸ್ವಲ್ಪ ದಿನ ಮಟ್ಟಿಗಾದರೂ ಅವರಿಗೆ ಅನುಕೂಲವಾಗುತ್ತದೆ ಎನ್ನುತ್ತಾರೆ ಸಿದ್ದರಾಮಯ್ಯ ಅವರ ಅಭಿಮಾನಿಗಳು







