'ಕೊರೋನ ವೈರಸ್ ನಿಂದ ಮೃತ' ಎಂದು ವೈದ್ಯರು ಘೋಷಿಸಿದ್ದ ಮಹಿಳೆ 1 ತಿಂಗಳ ಬಳಿಕ ಎದ್ದು ಕುಳಿತರು !

ಇಕ್ವೆಡಾರ್: ಕೊರೋನ ವೈರಸ್ ನಿಂದ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದ ಮಹಿಳೆಯೊಬ್ಬರು ಇದ್ದಕ್ಕಿದ್ದಂತೆ ಎದ್ದು ಕುಳಿತ ಘಟನೆ ನಡೆದಿದೆ. ಇಕ್ವೆಡಾರ್ ನ ಕ್ವಿಟೋ ಎಂಬಲ್ಲಿನ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಆದರೆ ಅದಾಗಲೇ ಕುಟುಂಬಸ್ಥರು ಬೇರೆ ಯಾರದ್ದೋ ಮೃತದೇಹದ ಅಂತ್ಯಕ್ರಿಯೆ ನಡೆಸಿದ್ದರು.
ಉಸಿರಾಟದ ತೊಂದರೆ ಮತ್ತು ಜ್ವರದಿಂದ ಬಳುತ್ತಿದ್ದ 74 ವರ್ಷದ ಅಲ್ಬಾ ಮಾರುರಿಯವರನ್ನು ಮಾರ್ಚ್ ನಲ್ಲಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಮೂರು ವಾರಗಳ ಕಾಲ ಅವರು ಪ್ರಜ್ಞೆ ಕಳೆದುಕೊಂಡಿದ್ದರು ಹಾಗು ಅವರು ಮೃತಪಟ್ಟಿದ್ದಾರೆ ಎಂದು ಮಾರ್ಚ್ 27ರಂದು ಘೋಷಿಸಲಾಗಿತ್ತು.
ಒಂದು ವಾರದ ಬಳಿಕ ಕುಟುಂಬಸ್ಥರಿಗೆ ಮೃತದೇಹವೊಂದನ್ನು ತೋರಿಸಲಾಗಿತ್ತು. ಆದರೆ ಕೊರೋನ ವೈರಸ್ ಭಯದಿಂದ ಯಾರೂ ಮೃತದೇಹದ ಬಳಿ ಹೋಗಿ ಗಮನಿಸಿರಲಿಲ್ಲ. ಇದು ತನ್ನ ಚಿಕ್ಕಮ್ಮ ಎಂದು ಮಹಿಳೆಯ ಸಂಬಂಧಿಯೊಬ್ಬರು ದೂರದಿಂದಲೇ ಮೃತದೇಹವನ್ನು ನೋಡಿ ಹೇಳಿದ್ದರು.
“ಆ ಮಹಿಳೆಗೂ ನನ್ನ ಚಿಕ್ಕಮ್ಮನ ರೀತಿಯದ್ದೇ ಕೂದಲಿತ್ತು. ಅದೇ ಚರ್ಮದ ಬಣ್ಣವೂ ಇತ್ತು. ಹತ್ತಿರ ಹೋಗಿ ನೋಡಲು ನನಗೆ ಭಯವಾಯಿತು” ಎಂದು ಸಂಬಂಧಿ ಹೇಳುತ್ತಾರೆ.
ನಂತರ ಮಹಿಳೆಯ ಅಂತ್ಯಸಂಸ್ಕಾರ ನಡೆಸಲಾಯಿತು. ಆದರೆ ಇದೇ ಗುರುವಾರ ಮರೂರಿಯವರಿಗೆ ಪ್ರಜ್ಞೆ ಬಂದಿದ್ದು, ವೈದ್ಯರು ಈ ಬಗ್ಗೆ ಮಾಹಿತಿ ನೀಡಿದಾಗ ಸಂಬಂಧಿಕರು ಆಶ್ಚರ್ಯಚಕಿತರಾಗಿದ್ದರು.
“ಇದು ಆಶ್ಚರ್ಯಕರ, ಆಕೆ ನಿಧನರಾಗಿದ್ದಾರೆ ಎಂದೇ ನಾವು ಭಾವಿಸಿದ್ದೆವು” ಎಂದು ಕುಟುಂಬಸ್ಥರು ಹೇಳುತ್ತಾರೆ.







