ಮೈಸೂರು: ಮಹೇಂದ್ರ ಕುಮಾರ್ ನಿಧನಕ್ಕೆ ಚಿಂತಕರು, ಸಾಹಿತಿಗಳು, ವಿವಿಧ ಸಂಘಟನೆಗಳಿಂದ ಸಂತಾಪ

ಮೈಸೂರು,ಎ.25: ಖ್ಯಾತ ಪ್ರಗತಿಪರ ಚಿಂತಕ, ಸಾಮಾಜಿಕ ಕಾರ್ಯಕರ್ತ, ಬಜರಂಗ ದಳದ ಮಾಜಿ ಸಂಚಾಲಕ ಮಹೇಂದ್ರ ಕುಮಾರ್ ನಿಧನಕ್ಕೆ ದಲಿತ ಸಂಘರ್ಷ ಸಮಿತಿ, ಬುದ್ಧಿ ಜೀವಿಗಳು, ಪ್ರಗತಿಪರ ಚಿಂತಕರು, ಸಾಹಿತಿಗಳೂ, ಸ್ವಾಮೀಜಿಗಳು, ವಿವಿಧ ಸಂಘಟನೆಗಳು ಸೇರಿದಂತೆ ಅನೇಕರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಮಹೇಂದ್ರ ಕುಮಾರ್ ನಿಧನದ ಸುದ್ದಿ ಕೇಳಿ ಆಘಾತಗೊಂಡ ಅನೇಕರು ಶನಿವಾರ ತಮ್ಮ ನೋವನ್ನು ವ್ಯಕ್ತಪಡಿಸಿದರು. ಉರಿಲಿಂಗಿ ಪೆದ್ದಿ ಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಮಾತನಾಡಿ, ಶುಕ್ರವಾರ ಸಂಜೆ 4.20 ರ ಸಮಯದಲ್ಲಿ ಮಾತನಾಡಿ ದೇಶದ ವಿದ್ಯಮಾನ ಮತ್ತು ಲಾಕ್‍ಡೌನ್ ನಿಂದ ಬಡವರು ಎದುರಿಸುತ್ತಿರುವ ಕಷ್ಟಗಳ ಕುರಿತು ಚರ್ಚಿಸಿದ್ದೆವು. ಬೆಳಗಾಗುವಷ್ಟರಲ್ಲಿ ಅವರ ಸಾವಿನ ಸುದ್ಧಿ ಕೇಳಿ ಆಘಾತವಾಗಿದೆ ಎಂದುನೋವಿನಿಂದ ನುಡಿದರು.
ಮಹೇಂದ್ರ ಕುಮಾರ್ ಅವರು ಶ್ರೇಷ್ಠ ಮಾನವತಾವಾದಿ ಅವರು ಬಿಟ್ಟು ಹೋದ ಹೆಜ್ಜೆ ಗುರುತುಗಳು ಮಂದಿನ ಯುವ ಪೀಳೀಗೆಗೆ ಮಾರ್ಗದರ್ಶನಗಳಾಗಿವೆ. ಅವರೊಬ್ಬ ಶ್ರೇಷ್ಠ ಪ್ರಜಾಪ್ರಭುತ್ವವಾದಿ, ಅಪ್ಪಟ ರಾಷ್ಟ್ರಪ್ರೇಮಿ, ಪ್ರಕರ ಚಿಂತಕರಾಗಿದ್ದರು. ದೇಶಕಟ್ಟುವಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ಶ್ರೇಷ್ಟ ಹೋರಾಟಗಾರ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದ ಧೀಮಂತ ವ್ಯಕ್ತಿತ್ವ ಎಂದು ಬಣ್ಣಿಸಿದರು. ಅವರೊಬ್ಬ ಮರಳುಗಾಡಿನಲ್ಲಿ ಓಯಸಿಸ್ ಇದ್ದಂತೆ. ಅತ್ಯಂತ ವಿರಳ. ಇಂತವರ ಸಾವು ಇಡೀ ಮಾನವ ಕುಲಕ್ಕೆ ಅಪಾರ ಹಾನಿಯುಂಟು ಮಾಡಿದೆ ಎಂದರು.
ಜಾತಿ ಧರ್ಮ, ವರ್ಣ, ವರ್ಗ, ಇದೆಲ್ಲವನ್ನೂ ಮೀರಿ ದೇಶವೆ ದೊಡ್ಡದು ಎಂದು ಒತ್ತಿ ಒತ್ತಿ ಹೇಳೀದ ಜೀವ ಇಂದು ನಮ್ಮ ಮುಂದೆ ಇಲ್ಲ, ಆದರೆ ಈ ದೇಶಕ್ಕೆ ಮಹೇಂದ್ರ ಕುಮಾರ್ ಅಂತವರು ಅತ್ಯಂತ ಜರೂರಾಗಿ ಬೇಕಾಗಿದೆ. ಕಲುಷಿತಗೊಂಡಿರುವ ಮಾಧ್ಯಮಗಳು, ಹಾಗೂ ಕಲುಷಿತ ಗೊಂಡ ರಾಜಕೀಯ ವಿದ್ಯಮಾನಗಳಲ್ಲಿ ಮಹೇಂದ್ರ ಕುಮಾರ್ ಅವರು, ನೇರವಾಗಿ ಸಮಾಜಕ್ಕೆ ಎಳೆ ಎಳೆಯಾಗಿ ತೋರಿಸುತಿದ್ದರು. ಮಹೇಂದ್ರ ಕುಮಾರ್ ಅವರ ಧ್ವನಿ ನಿಂತಿದೆ. ಆದರೆ ಅವರು ಬಿತ್ತಿದ ಬೀಜ ಅಸಂಖ್ಯಾತ ಭಾರತೀಯರ ಹೃದಯ ಸಾಮ್ರಾಜ್ಯ ಆಳುತ್ತಿದೆ ಎಂದರು.
ಖ್ಯಾತ ಸಾಹಿತಿ ಪ್ರೊ.ಭಗವಾನ್ ಮಾತನಾಡಿ, ಜಾತ್ಯತೀತ ಸಮಾಜ ಕಟ್ಟುವಲ್ಲಿ ತೊಡಗಿಸಿಕೊಂಡಿದ್ದ ಮಹೇಂದ್ರ ಕುಮಾರ್ ಅವರ ನಿಧನ ಅಪಾರ ನಷ್ಟವನ್ನುಂಟು ಮಾಡಿದೆ. ಸಿಎಎ, ಎನ್‍ಆರ್‍ಸಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದು ಎಲ್ಲರಲ್ಲೂ ಜಾಗೃತಿ ಮೂಡಿಸುತ್ತಿದ್ದರು, ಇಂತಹ ಹೋರಾಟವನ್ನು ಅವರ ಕುಟುಂಬ, ಅಭಿಮಾನಿಗಳು ಮತ್ತು ಸ್ನೇಹಿತರುಗಳು ಮುಂದುವರೆಸಿಕೊಂಡು ಹೋಗುವ ಮೂಲಕ ಮತ್ತಷ್ಟು ಬಲಿಷ್ಠಗೊಳಿಸಿದರೆ ಇದು ನಿಜವಾಗಿಯೂ ಮಹೇಂದ್ರ ಕುಮಾರ್ ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಹೇಳಿದರು.
ಮಹೇಂದ್ರ ಕುಮಾರ್ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಮತ್ತು ಶೋಷಿತ ವರ್ಗಗಳ ಶಕ್ತಿಯಾಗಿದ್ದರು. ಹಿಂದುತ್ವವಾದಿಗಳಾಗಿದ್ದ ಅವರು ಮನುಷ್ಯತ್ವದ ಕಡೆಗೆ ಬಂದು ಜನರಲ್ಲಿ ಜಾಗೃತಿ ಮೂಡಿಸಿ ಎಲ್ಲರಿಗೂ ಮಾರ್ಗದರ್ಶಕರಾಗಿದ್ದರು. ಅವರ ನಿಧನ ಈ ಎಲ್ಲಾ ವರ್ಗಗಳ ಧ್ವನಿಯನ್ನು ಅಡಗಿಸಿದೆ ಎಂದು ಜನಸಂಗ್ರಾಮ ಪರಿಷತ್ ವಿಭಾಗೀಯ ಸಂಚಾಲಕ ನಗರ್ಲೆ ವಿಜಯಕುಮಾರ್ ವಿಷಾದ ವ್ಯಕ್ತಪಡಿಸಿದರು.
ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಚೋರನಹಳ್ಳಿ ಶಿವಣ್ಣ ಮಾತನಾಡಿ, ಸನಾತನ ವಾದಿಗಳು, ಹಿಂದುತ್ವವಾದಿಗಳು ಮತ್ತು ಮನುವಾದಿಗಳು ಮೌಢ್ಯ ಬಿತ್ತಿ ಅದನ್ನೆ ಬಂಡವಾಳ ಮಾಡಿಕೊಂಡು ಜನರನ್ನು ದಿಕ್ಕು ತಪ್ಪಿಸಿ ಐಶಾರಾಮಿ ಜೀವನ ನಡೆಸಲು ಹೊರಟಿದ್ದವರ ವಾಸ್ಥವ ಸ್ಥಿತಿ ಅಂಕು ಡೊಂಕು ಮತ್ತು ಭ್ರಷ್ಟಾಚಾರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಮುಂದಾಗಿ ಸತ್ಯವನ್ನು ಸಮಾಜಕ್ಕೆ ಸಾರುವ ಕೆಲಸದಲ್ಲಿ ತೊಡಗಿದ್ದರು. ಇಂತಹ ಮಾನವೀಯತೆ ಮೈಗೂಡಿಸಿಕೊಂಡು ಮೌಢ್ಯದಿಂದ ವೈಚಾರಿಕತೆ ವಿಜ್ಞಾನದೆಡೆಗೆ ಕೊಂಡೊಯ್ಯುವಲ್ಲಿ ನಿರತರಾಗಿದ್ದ ಇವರ ನಿಧನದಿಂದ ದೇಶಕ್ಕೆ ಅಪಾರ ನಷ್ಟ ಉಂಟಾಗಿದೆ ಎಂದು ಹೇಳಿದರು.
ಪ್ರಗತಿಪರ ಚಿಂತಕ ಪ್ರೊ.ಮಹೇಶ್ ಚಂದ್ರಗುರು, ದಸಂಸ ಮುಖಂಡರಾದ ಕೆ.ವಿ.ದೇವೇಂದ್ರ, ಎಡದೊರೆ ಮಹದೇವಯ್ಯ, ಮಲ್ಲೇಶ್ ಚುಂಚನಹಳ್ಳಿ, ಆಲಗೋಡು ಶಿವಕುಮಾರ್, ಮಲ್ಲಹಳ್ಳಿ ನಾರಾಯಣ್, ಮಂಜು ಶಂಕರಪುರ, ರಾಜಶೇಖರ್, ಶಂಕರಪುರ ಸಿದ್ದು, ಅನಿಲ್ ಸೇರಿದಂತೆ ಅನೇಕರು ಸಂತಾಪ ವ್ಯಕ್ತಪಡಿಸಿದ್ದಾರೆ.







