ಕೌಟುಂಬಿಕ ದೌರ್ಜನ್ಯ ಪ್ರಕರಣ: ಸಾಂತ್ವನ ಕೇಂದ್ರಗಳಿಂದ 315 ಕರೆಗಳ ಸ್ವೀಕಾರ- ಹೈಕೋರ್ಟ್ ಗೆ ಸರಕಾರ ಹೇಳಿಕೆ

ಬೆಂಗಳೂರು, ಎ.25: ಲಾಕ್‍ಡೌನ್ ಜಾರಿಯಾದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೌಟುಂಬಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ 193 ಸಾಂತ್ವನ ಕೇಂದ್ರಗಳು ಒಟ್ಟು 315 ಕರೆಗಳನ್ನು ಸ್ವೀಕರಿಸಿವೆ ಎಂದು ರಾಜ್ಯ ಸರಕಾರ ಹೈಕೋರ್ಟ್‍ಗೆ ತಿಳಿಸಿದೆ.
ಈ ಕುರಿತು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ನ್ಯಾಯಪೀಠ ನಡೆಸಿತು.
ಸರಕಾರದ ಪರ ವಾದಿಸಿದ ವಕೀಲರು, ಕೌಟುಂಬಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಸಾಂತ್ವನ ಕೇಂದ್ರಗಳು 315 ಕರೆಗಳನ್ನು ಸ್ವೀಕರಿಸಿದರೆ, ಮಹಿಳಾ ಸಹಾಯವಾಣಿಯವರು 2020ರ ಮಾ.23ರಿಂದ ಎ.21ರವರೆಗೆ ಲಾಕ್‍ಡೌನ್ ಅವಧಿಯಲ್ಲಿ 1,194 ಕರೆಗಳನ್ನು ಸ್ವೀಕರಿಸಿದ್ದು, ಅದರಲ್ಲಿ 162 ಕರೆಗಳು ಕೌಟುಂಬಿಕ ದೌರ್ಜನ್ಯಕ್ಕೆ ಒಳಪಟ್ಟಿವೆ ಎಂದು ಪೀಠಕ್ಕೆ ತಿಳಿಸಿದರು.
ರಾಜ್ಯ ಸರಕಾರ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ 193 ಸಾಂತ್ವನ ಕೇಂದ್ರಗಳನ್ನು ಸ್ಥಾಪಿಸಿದ್ದು, ಈ ಕೇಂದ್ರಗಳು ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಆಪ್ತ ಸಮಾಲೋಚನೆ, ಕಾನೂನು ನೆರವು ಹಾಗೂ ವೈದ್ಯಕೀಯ ನೆರವು ನೀಡುತ್ತಿವೆ ಎಂದು ಪೀಠಕ್ಕೆ ತಿಳಿಸಿದರು.
ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದವರು ಪೊಲೀಸ್ ಸಹಾಯ ಕೇಂದ್ರ-100ಕ್ಕೆ ಕಾಲ್ ಮಾಡಿದರೂ ಆ ಕೇಂದ್ರದವರು ಸಾಂತ್ವನ ಕೇಂದ್ರಗಳಿಗೆ ಆ ಕಾಲ್‍ಗಳನ್ನು ವರ್ಗಾಯಿಸುತ್ತಾರೆ. ಅಲ್ಲದೆ, ಮಕ್ಕಳ ಅಭಿವೃದ್ಧಿ ಅಧಿಕಾರಿಗಳೂ ರಕ್ಷಣೆಯ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು.







