ದ.ಕ.ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಿಗೆ ಸಂಸದರಿಂದ ಆಹಾರ ಕಿಟ್ ವಿತರಣೆ

ಮಂಗಳೂರು, ಎ.26: ಸಂಸದ ನಳಿನ್ ಕುಮಾರ್ ಕಟೀಲ್ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಿಗೆ ಸುಮಾರು 15 ಸಾವಿರ ಆಹಾರ ಸಾಮಗ್ರಿ ಗಳ ಕಿಟ್‌ಗಳನ್ನು ಶಾಸಕರ ಮೂಲಕ ನಗರದ ಕದ್ರಿ ಮೈದಾನದಲ್ಲಿ ರವಿವಾರ ನಡೆದ ಕಾರ್ಯಕ್ರಮದಲ್ಲಿ ವಿತರಿಸಿದರು.
ಬಳಿಕ ಮಾತನಾಡಿದ ಅವರು, ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತನೂ ಐದು ಜನರಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ ಮಾಡ ಬೇಕೆಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಸೂಚಿಸಿದ್ದರು. ದ.ಕ.ಜಿಲ್ಲೆಯ 8 ಶಾಸಕರೂ ರಾಜ್ಯದಲ್ಲಿಯೇ ಅತೀ ಹೆಚ್ಚು ಕಿಟ್‌ಗಳನ್ನು ವಿತರಿಸಿ ಮಾದರಿಯಾಗಿದ್ದಾರೆ. ಸ್ವಂತ ಹಣದಿಂದ ಪ್ರಧಾನಿ ಮೋದಿಯ ಹೆಸರಿನಲ್ಲಿ ಮೋದಿ ಕಿಟ್‌ಗಳನ್ನು ಅರ್ಹರ ಮನೆ ಬಾಗಿಲಿಗೆ ತಲುಪಿಸಿದ್ದಾರೆ ಎಂದರು.
ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯ ನೇತೃತ್ವದಲ್ಲಿ ಜಿಲ್ಲೆಯ 16,500 ಮಂದಿ ನಿರಾಶ್ರಿತರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿದ್ದಾರೆ. ಇದರಲ್ಲಿ ಧಾರ್ಮಿಕ ದತ್ತಿ ಇಲಾಖೆಯಿಂದ 9,500 ಸಾವಿರ ಮಂದಿಗೆ ಹಾಗೂ ಉಳಿದವರಿಗೆ ‘ವಾರ್ ರೂಂ’ಗಳಿಂದ ಆಹಾರ ವ್ಯವಸ್ಥೆ ಮಾಡಲಾಗುತ್ತಿದೆ. ಇದೀಗ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ 20 ಸಾವಿರ ಆಹಾರ ಕಿಟ್‌ಗಳ ವಿತರಣೆ ಮಾಡುವ ಕಾರ್ಯ ಮಾಡಲಾಗುತ್ತಿದೆ. ಅದರಲ್ಲಿ 15 ಸಾವಿರ ಆಹಾರ ಕಿಟ್‌ಗಳನ್ನು ಇದೀಗ ನೀಡಲಾಗಿದೆ. ಇದು ಬಿಜೆಪಿ ನೇತೃತ್ವದಲ್ಲಿ ರಾಜ್ಯ ಮತ್ತು ದ.ಕ. ಜಿಲ್ಲೆ ಜೊತೆಗೂಡಿ ಮಾಡಿರುವ ಯೋಜನೆಯಾಗಿದೆ. ಈ ಆಹಾರ ಕಿಟ್‌ಗಳನ್ನು ಒದಗಿಸಲು ರಾಜ್ಯ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್, ಉಡುಪಿಯ ಉದ್ಯಮಿ ಜಿ.ಶಂಕರ್ ಹಾಗೂ ಮಂಗಳೂರಿನ ಉದ್ಯಮಿಗಳು ಬಹುದೊಡ್ಡ ಸಹಕಾರ ನೀಡಿದ್ದಾರೆ ಎಂದು ನಳಿನ್ ಕುಮಾರ್ ಕಟೀಲು ಹೇಳಿದರು.
ಈ ಸಂದರ್ಭ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ವೇದವ್ಯಾಸ ಕಾಮತ್, ಡಾ.ವೈ.ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ಸಂಜೀವ ಮಠಂದೂರು, ಹರೀಶ್ ಪೂಂಜ, ಎಸ್.ಅಂಗಾರ, ಮಹಾನಗರ ಪಾಲಿಕೆಯ ಸದಸ್ಯರು, ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.







