‘ಇದು ಸೂಕ್ತ ಸಮಯವಲ್ಲ’: ಆದಿತ್ಯನಾಥ್ ನಿರ್ಧಾರಕ್ಕೆ ಗಡ್ಕರಿ ವಿರೋಧ
ಹೊಸದಿಲ್ಲಿ: ದೇಶವ್ಯಾಪಿ ಲಾಕ್ ಡೌನ್‍ನಿಂದಾಗಿ ಸಿಕ್ಕಿಹಾಕಿಕೊಂಡಿರುವ ಉತ್ತರ ಪ್ರದೇಶದ ವಲಸೆ ಕಾರ್ಮಿಕರನ್ನು ರಾಜ್ಯಕ್ಕೆ ವಾಪಸ್ ಕರೆಸಿಕೊಳ್ಳಲು ಮುಖ್ಯಮಂತ್ರಿ ಆದಿತ್ಯನಾಥ್ ಅವರು ನಿರ್ಧರಿಸಿದ ಬೆನ್ನಲ್ಲೇ ಕೇಂದ್ರ ಸಚಿವ ನಿತಿನ್ ಗಡ್ಕರಿ, ಈ ನಡೆಯ ಬಗ್ಗೆ ಮರು ಆಲೋಚಿಸುವಂತೆ ಸಲಹೆ ಮಾಡಿದ್ದಾರೆ.
“ಬಸ್ ಕಾರ್ಯಾಚರಣೆ ಮಾಡುವ ಸಂಬಂಧ ಉತ್ತರ ಪ್ರದೇಶ ಸಿಎಂ ಹೇಳಿಕೆಯ ಬಗ್ಗೆ ನಾನು ಕೇಳಿದ್ದೇನೆ. ಆದರೆ ಆ ನಿರ್ಧಾರಕ್ಕೆ ವಿರುದ್ಧವಾಗಿ ಅವರಿಗೆ ಮನವಿ ಮಾಡಿಕೊಳ್ಳುತ್ತಿದ್ದೇನೆ. ನನ್ನ ಅಭಿಪ್ರಾಯದಂತೆ ಈ ಸಂದರ್ಭದಲ್ಲಿ ನಾವು ಎಚ್ಚರಿಕೆಯ ಹೆಜ್ಜೆ ಇಡಬೇಕು. ಇದು ಸೂಕ್ತ ಸಮಯವಲ್ಲ. ವಲಸೆ ಕಾರ್ಮಿಕರ ಪೈಕಿ ಯಾರಿಗಾದೂ ಸೋಂಕು ಹರಡಿದ್ದರೆ, ಇಡೀ ಉತ್ತರ ಪ್ರದೇಶಕ್ಕೆ ಅದು ದೊಡ್ಡ ಸಮಸ್ಯೆಯಾಗಲಿದೆ” ಎಂದು ಗಡ್ಕರಿ NDTVಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ವೈರಸ್ ಹರಡುವುದನ್ನು ತಡೆಯಲು ಲಾಕ್ ಡೌನ್ ಅವಧಿಯಲ್ಲಿ ಇಂಥ ವಲಸೆ ಕಾರ್ಮಿಕರಿಗೆ ಪ್ರತಿ ರಾಜ್ಯವೂ ಆಹಾರ ಮತ್ತು ವಸತಿ ಸೌಲಭ್ಯ ಕಲ್ಪಿಸಬೇಕು ಎಂಬ ಕೇಂದ್ರದ ಸೂಚನೆಯನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾಗಿರುವ ಅವರು ಪುನರುಚ್ಚರಿಸಿದರು.
“ಸದ್ಯಕ್ಕೆ ಎಲ್ಲೆಡೆ ಕೊರೋನಾ ವೈರಸ್ ಸೋಂಕು ಇದೆ. ವಲಸೆಗಾರರು ಮರಳುವಾಗ ತಾವು ಮಾತ್ರ ಬಾರದೇ ಕೊರೋನ ವೈರಸ್ ಕೂಡ ಅವರ ಜತೆ ಬರುತ್ತದೆ. ವಲಸೆಯವರನ್ನು ವಾಪಾಸು ಕರೆಸಿಕೊಳ್ಳುವುದಾದರೆ, ಅವರಿಗೆ ಕೊರೋನ ಸೋಂಕು ಇಲ್ಲ ಎಂದು ದೃಢಪಡಿಸಿಕೊಳ್ಳಬೇಕು. ಸದ್ಯಕ್ಕೆ ಪರಿಸ್ಥಿತಿ ಕಷ್ಟಕರವಾಗಿದೆ. ವಲಸಿಗರು ಎಲ್ಲಿದ್ದಾರೋ ಅಲ್ಲೇ ಆಹಾರ ಮತ್ತು ವಸತಿ ಕಲ್ಪಿಸಬೇಕು” ಎಂದು ಸ್ಪಷ್ಟಪಡಿಸಿದರು.
ಬಿಹಾರ ಮುಖ್ಯಮಂತ್ರಿ ಹಾಗೂ ಬಿಜೆಪಿ ಮಿತ್ರಪಕ್ಷವಾದ ಜೆಡಿಯು ಮುಖಂಡ ನಿತೀಶ್ ಕುಮಾರ್ ಕೂಡಾ ಇದೇ ಅಭಿಪ್ರಾಯವನ್ನು ಈ ಮೊದಲು ವ್ಯಕ್ತಪಡಿಸಿದ್ದರು.