ಕೋವಿಡ್-19 ರೋಗಿಗಳ ಒತ್ತಡ ತಗ್ಗಿಸಲು ಮಧ್ಯಪ್ರದೇಶದಲ್ಲಿ ‘ಆನಂದ ವಿಭಾಗ’ ರಚನೆ

ಭೋಪಾಲ,ಎ.26: ಕೊರೋನ ವೈರಸ್ ರೋಗಿಗಳ ಒತ್ತಡವನ್ನು ತಗ್ಗಿಸಲು ಮತ್ತು ಪಿಡುಗಿನ ವಿರುದ್ಧ ಹೋರಾಟದ ಮುಂಚೂಣಿಯಲ್ಲಿರುವವರ ನೈತಿಕ ಸ್ಥೈರ್ಯವನ್ನು ಹೆಚ್ಚಿಸಲು ಪ್ರತ್ಯೇಕ ‘ಆನಂದ ವಿಭಾಗ’ವನ್ನು ಸ್ಥಾಪಿಸಲು ಮಧ್ಯಪ್ರದೇಶ ಸರಕಾರವು ನಿರ್ಧರಿಸಿದೆ.
2016ರಲ್ಲಿ ರಾಜ್ಯದ ಆಗಿನ ಮುಖ್ಯಮಂತ್ರಿ ಶಿವರಾಜ ಸಿಂಗ್ ಚೌಹಾಣ್ ಅವರು ‘ಆನಂದ ವಿಭಾಗ ’ವನ್ನು ಸ್ಥಾಪಿಸಿದ್ದರು. ಆದರೆ 2018ರಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್ ಸರಕಾರವು ಅದನ್ನು ‘ಆಧ್ಯಾತ್ಮಿಕ ವಿಭಾಗ’ದೊಡನೆ ವಿಲೀನಗೊಳಿಸಿತ್ತು. ಇದೀಗ ಚೌಹಾಣ್ ಅವರು ‘ಆನಂದ ವಿಭಾಗ ’ವನ್ನು ಪ್ರತ್ಯೇಕಿಸಿ ಕೋವಿಡ್-19ರ ವಿರುದ್ಧದ ಹೋರಾಟದಲ್ಲಿ ತೊಡಗಿಸುವಂತೆ ಅಧಿಕಾರಿಗಳಿಗೆ ನಿರ್ದೇಶ ನೀಡಿದ್ದಾರೆ.
ಕೊರೋನ ವೈರಸ್ ಸೋಂಕಿತರಿಗೆ ಉಲ್ಲಾಸದ ವಾತಾವರಣದಲ್ಲಿ ಚಿಕಿತ್ಸೆಯನ್ನು ನೀಡಬೇಕು ಎಂದು ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ರೋಗಿಗಳ ನೈತಿಕ ಸ್ಥೈರ್ಯವನ್ನು ಹೆಚ್ಚಿಸುವ ಮತ್ತು ಅವರ ಒತ್ತಡವನ್ನು ತಗ್ಗಿಸುವ ಅಗತ್ಯಕ್ಕೆ ಅವರು ಒತ್ತು ನೀಡಿದ್ದಾರೆ ಎಂದು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.
ಶನಿವಾರ ಕೊರೋನ ವೈರಸ್ ಸ್ಥಿತಿಯನ್ನು ಪುನರ್‌ಪರಿಶೀಲಿಸಲು ನಡೆಸಿದ ಸಭೆಯಲ್ಲಿ ಚೌಹಾಣ್ ಅವರು,ಕೋವಿಡ್-19 ಆಸ್ಪತ್ರೆಗಳು ಮತ್ತು ಕ್ವಾರಂಟೈನ್ ಕೇಂದ್ರಗಳಲ್ಲಿ ಶ್ರಾವ್ಯ-ದೃಶ್ಯ ಮಾರ್ಗಗಳ ಮೂಲಕ ಸಂಗೀತ, ಚಲನಚಿತ್ರ,ಸ್ಫೂರ್ತಿದಾಯಕ ಸಂದೇಶಗಳು ಮತ್ತು ಮನರಂಜನಾ ಕಾರ್ಯಕ್ರಮಗಳಿಗೆ ಅವಕಾಶ ನೀಡಬೇಕು. ಜೊತೆಗೆ ಕೊರೋನ ವೈರಸ್ ವಿರುದ್ಧ ಹೋರಾಟದಲ್ಲಿ ನಿರತ ಸಿಬ್ಬಂದಿಗಳು ಯಾವುದೇ ಒತ್ತಡವಿಲ್ಲದೆ ಕಾರ್ಯ ನಿರ್ವಹಿಸಲು ಅವರ ನೈತಿಕ ಸ್ಥೈರ್ಯವನ್ನು ಹೆಚ್ಚಿಸುವ ಪ್ರಯತ್ನಗಳು ನಡೆಯಬೇಕು. ಇದಕ್ಕಾಗಿ ‘ಆನಂದ ವಿಭಾಗ’ವನ್ನು ಪ್ರತ್ಯೇಕಿಸಿ ಅದರ ಸೇವೆಗಳನ್ನು ಪಡೆದುಕೊಳ್ಳಬೇಕು ಎಂದು ಹೇಳಿದ್ದರು.
ರಾಜ್ಯದ ಬಿಜೆಪಿ ನೇತೃತ್ವದ ಸರಕಾರವು ಕೊರೋನ ವೈರಸ್ ವಿರುದ್ಧದ ಹೋರಾಟದಲ್ಲಿ ವಿಫಲವಾಗಿದೆ ಎಂದು ಕಾಂಗ್ರೆಸ್ ಹೇಳಿದೆ. ‘ಆನಂದ ವಿಭಾಗ’ವು ಪ್ರಚಾರ ತಂತ್ರವಾಗಿದೆ. ಕೊರೋನ ವೈರಸ್‌ನಿಂದ ಹೆಚ್ಚಿನ ಸಾವುಗಳು ಸಂಭವಿಸಿರುವ ರಾಜ್ಯಗಳಲ್ಲಿ ಮಧ್ಯಪ್ರದೇಶ ಒಂದಾಗಿದೆ. ಇಂತಹ ಪ್ರಚಾರ ತಂತ್ರದ ಬದಲು ರಾಜ್ಯ ಸರಕಾರವು ಪರೀಕ್ಷಾ ಸೌಲಭ್ಯಗಳನ್ನು ಹೆಚ್ಚಿಸಲು ಮತ್ತು ಆಸ್ಪತ್ರೆಗಳಿಗೆ ಅಗತ್ಯ ಉಪಕರಣಗಳನ್ನು ಒದಗಿಸಲು ಹೆಚ್ಚಿನ ಗಮನವನ್ನು ಹರಿಸಬೇಕು. ಜನರು ಬದುಕಿದ್ದಾಗ ಮಾತ್ರ ಆನಂದ ಇರುತ್ತದೆ ಎಂದು ಈ ಹಿಂದೆ ಆಧ್ಯಾತ್ಮಿಕ ವಿಭಾಗದ ಹೊಣೆಯನ್ನು ಹೊತ್ತಿದ್ದ ರಾಜ್ಯದ ಮಾಜಿ ಸಚಿವ ಪಿ.ಸಿ.ಶರ್ಮಾ ಹೇಳಿದರು.







