ಕೊರೋನ ವೈರಸ್‌ಗೆ ಪ.ಬಂಗಾಳದ ಹಿರಿಯ ವೈದ್ಯಾಧಿಕಾರಿ ಬಲಿ
ಕೋಲ್ಕತಾ,ಎ.26: ವಾರದ ಹಿಂದೆ ಕೊರೋನ ವೈರಸ್ ಸೋಂಕು ದೃಢಪಟ್ಟ ಬಳಿಕ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದ ಪ.ಬಂಗಾಳ ಆರೋಗ್ಯ ಸೇವೆಗಳ ಸಹಾಯಕ ನಿರ್ದೇಶಕರು ರವಿವಾರ ಬೆಳಿಗ್ಗೆ ನಿಧನರಾಗಿದ್ದಾರೆ.
60ರ ಹರೆಯದ ಈ ಅಧಿಕಾರಿ ರಾಜ್ಯದಲ್ಲಿ ಕೊರೋನ ವೈರಸ್‌ಗೆ ಬಲಿಯಾದ ಮೊದಲ ವೈದ್ಯರಾಗಿದ್ದಾರೆ. ವೈದ್ಯರ ಪತ್ನಿಯಲ್ಲಿಯೂ ಸೋಂಕು ಪತ್ತೆಯಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ವೈದ್ಯಾಧಿಕಾರಿಯ ನಿಧನಕ್ಕೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತೀವ್ರ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ. ಪ.ಬಂಗಾಳ ವೈದ್ಯರ ವೇದಿಕೆಯೂ ಸಂತಾಪಗಳನ್ನು ವ್ಯಕ್ತಪಡಿಸಿದ್ದು, ಮೃತರ ಪತ್ನಿಯ ಶೀಘ್ರ ಚೇತರಿಕೆಯನ್ನು ಹಾರೈಸಿದೆ.
ರಾಜ್ಯದಲ್ಲಿಯ ವೈದ್ಯರಿಗೆ ಸೀಮಿತ ಸಂಪನ್ಮೂಲಗಳ ಕುರಿತು ಕಳವಳವನ್ನು ವ್ಯಕ್ತಪಡಿಸಿರುವ ಅದು,ಇದರಿಂದಾಗಿ ಅವರ ಜೀವಕ್ಕೆ ಅಪಾಯ ಎದುರಾಗಿದೆ ಎಂದು ಹೇಳಿದೆ.ಪ.ಬಂಗಾಳದಲ್ಲಿ 600ಕ್ಕೂ ಅಧಿಕ ಕೊರೋನ ವೈರಸ್ ಪ್ರಕರಣಗಳು ದಾಖಲಾಗಿದ್ದು, 18 ಜನರು ಮೃತಪಟ್ಟಿದ್ದಾರೆ.
Next Story