ಢಾಕಾ: ಇಸ್ಕಾನ್ ದೇಗುಲದಲ್ಲಿ 31 ಮಂದಿಗೆ ಸೋಂಕು ಬಾಂಗ್ಲಾದಲ್ಲಿ 5 ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಢಾಕಾ,ಎ.26: ಬಾಂಗ್ಲಾ ದೇಶದ ರಾಜಧಾನಿ ಢಾಕಾದಲ್ಲಿ ಮುಚ್ಚಲ್ಪಟ್ಟಿರುವ ಇಸ್ಕಾನ್ ದೇವಾಲಯದಲ್ಲಿ 31 ಮಂದಿಗೆ ಕೊರೋನ ಸೋಂಕು ತಗಲಿರುವುದಾಗಿ ರವಿವಾರ ವರದಿಯಾಗಿದೆ. ಇದರೊಂದಿಗೆ ದೇಶಾದ್ಯಂತ ಸೋಂಕಿತರ ಸಂಖ್ಯೆ 5 ಸಾವಿರದ ಸನಿಹಕ್ಕೆ ತಲುಪಿದೆ.
ಮಾರ್ಚ್ 8ರಂದು ಬಾಂಗ್ಲಾದೇಶದಲ್ಲಿ ಕೊರೋನ ವೈರಸ್‌ನ ಪ್ರಥಮ ಪ್ರಕರಣ ವರದಿಯಾದ ಬಳಇಕ ಈ ದೇವಾಲಯವು ಮುಚ್ಚುಗಡೆಗೊಂಡಿತ್ತು. ಆದಾಗ್ಯೂ ಅಲ್ಲಿ ನೆಲೆಸಿರುವವರಿಗೆ ಸೋಂಕು ಹರಡಿರುವುದು ವೈದ್ಯಕೀಯ ಅಧಿಕಾರಿಗಳನ್ನು ಚಕಿತಗೊಳಿಸಿದೆ.
‘‘ದೇವಾಲಯದಲ್ಲಿ ಯಾರಿಗೂ ಪ್ರವೇಶಕ್ಕೆ ಅವಕಾಶ ನೀಡಿಲ್ಲ. ಇಷ್ಟೊಂದು ಕಾಳಜಿ ತೆಗೆದುಕೊಂಡಿದ್ದರೂ ಇಷ್ಟೊಂದು ಜನರಿಗೆ ಹೇಗೆ ಸೋಂಕು ತಗಲಿತೆಂಬುದು ನನಗೆ ತಿಳಿಯುತ್ತಿಲ್ಲ’’ ಎಂದು ಢಾಕಾದ ಗೆಂಡಾರಿಯಾ ಪ್ರದೇಶದ ಪೊಲೀಸ್‌ಠಾಣಾಧಿಕಾರಿ ಸಾಜು ಮಿಯಾ ತಿಳಿಸಿದ್ದಾರೆ.
ಬಾಂಗ್ಲಾ ಸರಕಾರದ ರೋಗ ನಿಯಂತ್ರಣ ಸಂಸ್ಥೆ ಐಇಡಿಸಿಆರ್‌ನಿಂದ ಶನಿವಾರ ಇಸ್ಕಾನ್ ದೇವಾಲಯದಲಿದ್ದವರ ಕೊರೋನಾ ಪರೀಕ್ಷೆಯ ವಿವರಗಳನ್ನು ಪ್ರಕಟಿಸಿದ್ದು, ಅವರಲ್ಲಿ 31 ಮಂದಿಗೆ ಪಾಸಿಟಿವ್ ಬಂದಿತ್ತು.
ಈ ದೇವಾಲಯದಲ್ಲಿ ಅರ್ಚಕರು, ಅಧಿಕಾರಿಗಳು ಹಾಗೂ ಭಕ್ತರು ಸೇರಿದಂತೆ 100ಕ್ಕೂ ಅಧಿಕ ಮಂದಿ ವಾಸವಾಗಿದ್ದಾರೆ.
ಗೆಂಡಾರಿಯಾ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಹಳೆ ಢಾಕಾಪ್ರದೇಶದಲ್ಲಿ ಈವರೆಗೆ ಒಟ್ಟು 55 ಕೊರೋನಾ ಸೋಂಕಿನ ಪ್ರಕರಣಗಳು ಪತ್ತೆಯಾಗಿದ್ದು, ಮುವರು ಸಾವನ್ನಪ್ಪಿದ್ದಾರೆ. ಬಾಂಗ್ಲಾ ದೇಶಾದ್ಯಂತ ಈತನಕ ಒಟ್ಟು 4998 ಕೊರೋನಾ ಪ್ರಕರಣಗಳು ವರದಿಯಾಗಿದ್ದು, 140 ಮಂದಿ ಮೃತಪಟ್ಟಿದ್ದಾರೆ.







