ನನ್ನ ಮೇಲೆ ಹಲ್ಲೆಯಾದಾಗ ಟಿವಿ ನಿರೂಪಕರು, ಬಿಜೆಪಿಯವರು ಯಾಕೆ ಮಾತನಾಡಿಲ್ಲ: ಸ್ವಾಮಿ ಅಗ್ನಿವೇಶ್ ಪ್ರಶ್ನೆ

ಹೊಸದಿಲ್ಲಿ, ಎ.26: ಪಾಲ್ಘಾರ್‌ನಲ್ಲಿ ಇಬ್ಬರು ಸಾಧುಗಳ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿರುವ ಘಟನೆ ಬಗ್ಗೆ ಬಿಜೆಪಿ ಮುಖಂಡರು, ಸಂಘಪರಿವಾರ ಕಾರ್ಯಕರ್ತರಿಂದ ಟಿವಿಯಲ್ಲಿ ಭಾರೀ ಕೂಗಾಟ, ಚರ್ಚೆ ನಡೆಯುತ್ತಿದೆ. ಆದರೆ ಈ ಹಿಂದೆ ತನ್ನ ಮೇಲೆ ಹಲ್ಲೆ ನಡೆದಾಗ ಯಾಕೆ ಯಾರೂ ಸೊಲ್ಲೆತ್ತಿರಲಿಲ್ಲ ಎಂದು ಸ್ವಾಮಿ ಅಗ್ನಿವೇಶ್ ಪ್ರಶ್ನಿಸಿದ್ದಾರೆ.
“ಪಾಲ್ಘಾರ್‌ನಲ್ಲಿ ನಡೆದ ಹಲ್ಲೆಯಿಂದ ಮೃತಪಟ್ಟವರಲ್ಲಿ ಇಬ್ಬರು ಸಾಧುಗಳು ವಾರಣಾಸಿಯ ಆಖಾಡವೊಂದಕ್ಕೆ ಸಂಬಂಧಿಸಿದ್ದವರು. ಈ ಹಿನ್ನೆಲೆಯಲ್ಲಿ ಸಂಘಪರಿವಾರ ಹಾಗೂ ಟಿವಿ ನಿರೂಪಕರ ಒಂದು ವರ್ಗ ಈ ಘಟನೆಗೆ ಕೋಮು ಬಣ್ಣ ಬಳಿಯಲು ಮುಂದಾಗಿದ್ದಾರೆ. ಹಲ್ಲೆ ನಡೆಸಿದವರಲ್ಲಿ ಮುಸ್ಲಿಮರು ಅಥವಾ ಕ್ರಿಶ್ಚಿಯನ್ನರು ಇರಲಿಲ್ಲ. ಹಲ್ಲೆ ನಡೆಸಿದವರು ಆದಿವಾಸಿಗಳೆಂದು ತಿಳಿದಿದ್ದರೂ, ಈ ಪ್ರಕರಣದಲ್ಲಿ ಮುಸ್ಲಿಮರು ಅಥವಾ ಕ್ರಿಶ್ಚಿಯನ್ ಮಿಷನರಿ ಪಾತ್ರದ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಿರುವುದು ಖಂಡನೀಯ” ಎಂದು ಅಗ್ನಿವೇಶ್ ಹೇಳಿದ್ದಾರೆ.
ತನ್ನ ಮೇಲೆ 2018ರ ಜುಲೈಯಲ್ಲಿ ಜಾರ್ಖಂಡ್‌ನಲ್ಲಿ ಮಾರಣಾಂತಿಕ ಹಲ್ಲೆಯಾದಾಗ, ಎಫ್‌ಐಆರ್‌ನಲ್ಲಿ ಬಿಜೆಪಿ, ಆರೆಸ್ಸೆಸ್ ಮತ್ತು ಬಿಜೆಪಿ ಯುವಮೋರ್ಛಾದ 8 ಸದಸ್ಯರ ಹೆಸರನ್ನು ಎಫ್‌ಐಆರ್‌ನಲ್ಲಿ ಪೊಲೀಸರು ಉಲ್ಲೇಖಿಸಿದ್ದರು. ಆದರೆ ಆಗ ಜಾರ್ಖಂಡ್‌ನಲ್ಲಿ ಬಿಜೆಪಿ ಸರಕಾರವಿದ್ದ ಕಾರಣ ಈ ಪ್ರಕರಣ ಹಳ್ಳಹಿಡಿದಿದೆ. ಆರೋಪಿಗಳಿಗೆ ಶಿಕ್ಷೆಯಾಗಿಲ್ಲ. 2018ರ ಸೆಪ್ಟೆಂಬರ್‌ನಲ್ಲಿ ದಿಲ್ಲಿಯಲ್ಲಿ ಮತ್ತೆ ತನ್ನ ಮೇಲೆ ಬಿಜೆಪಿ ಕಾರ್ಯಕರ್ತರಿಂದ ಹಲ್ಲೆ ನಡೆದಾಗಲೂ ಪ್ರಕರಣವನ್ನು ಸಿಬಿಐಗೆ ವಹಿಸಿ ಸುಮ್ಮನಿದ್ದಾರೆ ಎಂದು ಅಗ್ನಿವೇಶ್ ಹೇಳಿದ್ದಾರೆ.







