ಯೆಸ್ ಬ್ಯಾಂಕ್ ಹಗರಣ: ಡಿಎಚ್‌ಎಫ್‌ಎಲ್ ನಿರ್ದೇಶಕರಿಗೆ ಸಿಬಿಐ ಕಸ್ಟಡಿ

ಮುಂಬೈ, ಎ.26: ಯೆಸ್ ಬ್ಯಾಂಕ್ ಮತ್ತು ಡಿಎಚ್‌ಎಫ್‌ಎಲ್ ವಂಚನೆ ಪ್ರಕರಣದಲ್ಲಿ ಆರೋಪಿಗಳಾದ ದಿವಾನ್ ಹೌಸಿಂಗ್ ಫೈನಾನ್ಸ್ ಲಿ. ಸಂಸ್ಥೆಯ ನಿರ್ದೇಶಕರಾದ ಕಪಿಲ್ ಮತ್ತು ಧೀರಜ್ ವಾಧ್ವಾನ್‌ರನ್ನು ಸಿಬಿಐ ಕಸ್ಟಡಿಗೆ ವಹಿಸಲಾಗಿದೆ ಎಂದು ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶ್‌ಮುಖ್ ಹೇಳಿದ್ದಾರೆ.
ಸಿಬಿಐ ತಂಡವೊಂದು ಕಪಿಲ್ ಮತ್ತು ಧೀರಜ್ ವಾಧ್ವಾನ್‌ರನ್ನು ಕಸ್ಟಡಿಗೆ ತೆಗೆದುಕೊಂಡಿದೆ ಎಂದು ದೇಶ್‌ಮುಖ್ ಟ್ವೀಟ್ ಮಾಡಿದ್ದಾರೆ. ಸತಾರಾ ಪೊಲೀಸರು ಅಗತ್ಯದ ನೆರವು ನೀಡುತ್ತಿದ್ದು ಮುಂಬೈವರೆಗೆ ಪೊಲೀಸ್ ವಾಹನದಲ್ಲಿ ಆರೋಪಿಗಳನ್ನು ಕಳುಹಿಸಿದ್ದಾರೆ.
ಬಂಧನ ಪ್ರಕ್ರಿಯೆ ಮುಂದುವರಿದಿದೆ ಎಂದವರು ಹೇಳಿದ್ದಾರೆ. ಕಪಿಲ್ ಮತ್ತು ವಾಧ್ವಾನರ ಕೊರೋನ ವೈರಸ್ ಕ್ವಾರಂಟೈನ್ ಅವಧಿ ಮುಗಿದಿರುವುದರಿಂದ ಅವರನ್ನು ಬಂಧಿಸಬಹುದು ಎಂದು ಎಪ್ರಿಲ್ 22ರಂದು ಮಹಾರಾಷ್ಟ್ರ ಸರಕಾರ ಸಿಬಿಐ ಮತ್ತು ಜಾರಿ ನಿರ್ದೇಶನಾಲಯಕ್ಕೆ ತಿಳಿಸಿತ್ತು. ಆದರೆ ಮರುದಿನ ಮುಂಬೈಯ ನ್ಯಾಯಾಲಯವೊಂದು ಇಬ್ಬರಿಗೂ ಎಪ್ರಿಲ್ 27ರವರೆಗೆ ಬಂಧನದಿಂದ ರಕ್ಷಣೆ ಒದಗಿಸಿತ್ತು.
ಈ ಮಧ್ಯೆ, ಕ್ವಾರಂಟೈನ್‌ನಲ್ಲಿದ್ದ ಸಂದರ್ಭ ವಾಧ್ವಾನ್ ಮತ್ತವರ ಕುಟುಂಬದ ಸದಸ್ಯರಿಗೆ ತುರ್ತು ಕಾರಣದ ಹಿನ್ನೆಲೆಯಲ್ಲಿ ಖಂಡಾಲಾದಿಂದ ಮಹಾಬಲೇಶ್ವರಕ್ಕೆ ತೆರಳಲು ವಿಶೇಷ ಪಾಸ್ ಒದಗಿಸಿದ ಮಹಾರಾಷ್ಟ್ರದ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಮಿತಾಬ್ ಗುಪ್ತಾರನ್ನು ವಿಚಾರಣೆ ನಡೆಸಲಾಗಿದ್ದು, ಇದರ ವರದಿಯನ್ನು ಸರಕಾರ ಶೀಘ್ರ ಸಲ್ಲಿಸಲಿದೆ ಎಂದು ದೇಶ್‌ಮುಖ್ ಹೇಳಿದ್ದಾರೆ.







