ಲಾಕ್ಡೌನ್: ಸಂಕಷ್ಟದಲ್ಲಿ ಮಂಗಳಮುಖಿಯರ ಬದುಕು

ಸಾಂದರ್ಭಿಕ ಚಿತ್ರ
ಬೆಂಗಳೂರು, ಎ.26: ದೀರ್ಘಕಾಲದ ಲಾಕ್ಡೌನ್ ಹಿನ್ನೆಲೆಯಲ್ಲಿ ಮಂಗಳಮುಖಿಯರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ದಿನದ ಊಟದ ಚಿಂತೆಯ ಜತೆಗೆ ಮನೆ ಬಾಡಿಗೆ ನೀಡಲಾಗದಂತಹ ಪರಿಸ್ಥಿತಿ ಉಂಟಾಗಿದೆ.
ಬೆಂಗಳೂರಿನಲ್ಲಿ ಸುಮಾರು ಆರು ಸಾವಿರ ಮಂಗಳಮುಖಿಯರಿದ್ದಾರೆ. ಅವರೆಲ್ಲರೂ ಸಿಗ್ನಲ್ಗಳಲ್ಲಿ ಭಿಕ್ಷಾಟನೆ ಸೇರಿದಂತೆ ಇನ್ನಿತರ ಕಾಯಕದಲ್ಲಿ ತೊಡಗಿದ್ದವರು. ಈ ವೃತ್ತಿಯಿಂದ ದಿನಕ್ಕೆ 300-400 ರೂ. ಸಂಪಾದಿಸುತ್ತಿದ್ದರು. ಲಾಕ್ಡೌನ್ನಿಂದಾಗಿ ಆದಾಯವಿಲ್ಲವಾಗಿದ್ದು, ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಅವರು ಅವಲತ್ತುಕೊಂಡಿದ್ದಾರೆ.
ಈ ಪರಿಸ್ಥಿತಿಯಲ್ಲಿ ಬಾಡಿಗೆ ಕಟ್ಟಲು ಆಗುತ್ತಿಲ್ಲ. ಸರಕಾರ ನೀಡಿದ ಆಹಾರದ ಕಿಟ್ನಲ್ಲಿ ತಿಂಗಳಿಗೆ ಸಾಕಾಗುವಷ್ಟು ವಸ್ತುಗಳೇ ಇರಲಿಲ್ಲ. ಬಳಿಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಹಾಗೂ ಬಿಬಿಎಂಪಿ ಅಧಿಕಾರಿಗಳಿಗೆ ದೂರು ನೀಡಲಾಯಿತು. ನಂತರ ಆಹಾರ ಕಿಟ್ನಲ್ಲಿ 5 ಕೆ.ಜಿ.ಅಕ್ಕಿ ನೀಡಲಾಯಿತು ಎಂದು ಮಂಗಳಮುಖಿಯೊಬ್ಬರು ಹೇಳಿದ್ದಾರೆ.
ಲೌಕ್ಡೌನ್ ಮುಗಿದರೂ ನಮ್ಮ ಬದುಕು ಸುಧಾರಿಸಲು ನಾಲ್ಕೈದು ತಿಂಗಳು ಬೇಕು. ಈ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಂಗಳಮುಖಿಯರತ್ತ ಗಮನ ಹರಿಸುವ ಅಗತ್ಯವಿದೆ. ಬೆಂಗಳೂರಿನ ಹಲವೆಡೆ ಮಂಗಳಮುಖಿಯರು ನೆಲೆಸಿದ್ದು, ಕೆಲವರು ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಅವರ ಬಗ್ಗೆಯೂ ಸಂಬಂಧಪಟ್ಟ ಅಧಿಕಾರಿಗಳ ಗಮನ ಹರಿಸಬೇಕಾಗಿದೆ ಎಂದು ಮಂಗಳಮುಖಿ ಸೌಮ್ಯಾ ಎಂಬುವವರು ಹೇಳಿದ್ದಾರೆ.
ಎರಡು ತಿಂಗಳಿಗೆ 1200 ರೂ.: ಮೈತ್ರಿ ಯೋಜನೆಯಡಿ ಸರಕಾರ ಮಂಗಳಮುಖಿಯರಿಗೆ ಪ್ರತಿ ತಿಂಗಳು 600 ನೀಡುತ್ತಿದೆ. ಈಗ ಕೊರೋನ ಹಿನ್ನೆಲೆಯಲ್ಲಿ ಸರಕಾರ ಎರಡು ತಿಂಗಳ ಹಣ ನೀಡಿದರೆ, ಎಲ್ಲಿ ಸಾಲುತ್ತದೆ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತೆ ಅಕ್ಕೈ ಪದ್ಮಶಾಲಿ. ಅಲ್ಲದೆ ಮೈತ್ರಿ ಯೋಜನೆಯಡಿ ಹಣ ಇನ್ನೂ ಕೆಲವು ಮಂಗಳಮುಖಿಯರಿಗೆ ಹಣ ತಲುಪಿಲ್ಲ.
ನಗರದಲ್ಲಿ ಮಂಗಳಮುಖಿಯರ ನೆಲೆ: ಬೆಂಗಳೂರಿನ ದಾಸರಹಳ್ಳಿ, ಯಲಹಂಕ, ಅಮೃತ ಹಳ್ಳಿ, ಹೆಬ್ಟಾಳ, ಬಾಪೂಜಿ ನಗರ, ಆರ್ ಪಿಸಿ ಲೇಔಟ್, ಕಾಮಾಕ್ಷಿ ಪಾಳ್ಯ, ಬೊಮ್ಮನಹಳ್ಳಿ, ಕೂಡ್ಲಿಗೇಟ್, ಬೈಯಪ್ಪನಹಳ್ಳಿ, ಕಾಕ್ಸ್ಟೌನ್ ಸೇರಿದಂತೆಇನ್ನೂ ಹಲವು ಪ್ರದೇಶಗಳಲ್ಲಿ ಬಾಡಿಗೆ ಮನೆಗಳಲ್ಲಿ ವಾಸವಾಗಿದ್ದಾರೆ. ಇವರಿಗೆಲ್ಲರಿಗೂ ಬಾಡಿಗೆದಾರರು ಬಾಡಿಗೆ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಸರಕಾರ ಇವರ ನೆರವಿಗೆ ಬರಬೇಕು ಎಂದು ಅಕ್ಕೈ ಒತ್ತಾಯಿಸುತ್ತಿದ್ದಾರೆ.







