ಖ್ಯಾತ ಚಿತ್ರ ಕಲಾವಿದೆ ಝರೀನಾ ಹಶ್ಮಿ ನಿಧನ

ಹೊಸದಿಲ್ಲಿ, ಎ.26: ಭಾರತ ಮೂಲದ ಅಮೆರಿಕನ್ ಚಿತ್ರಕಲಾವಿದೆ ಮತ್ತು ಶಿಲ್ಪಿ ಝರೀನಾ ಹಶ್ಮಿ(83 ವರ್ಷ) ಲಂಡನ್‌ನಲ್ಲಿ ನಿಧನರಾಗಿದ್ದಾರೆ ಎಂದು ಕವಿ ರಂಜೀತ್ ಹೊಸ್ಕೋಟೆ ಭಾನುವಾರ ಟ್ವೀಟ್ ಮಾಡಿದ್ದಾರೆ.
ಝರೀನಾ ಹಶ್ಮಿ ಲಂಡನ್‌ನಲ್ಲಿ ನಿಧನರಾದ ಸುದ್ಧಿ ತಿಳಿದು ಅತೀವ ದುಃಖವಾಗಿದೆ. ಬುದ್ಧಿವಂತಿಕೆ, ಜಾಣ್ಮೆ ಮತ್ತು ಸಮಯಸ್ಫೂರ್ತಿ ಹೊಂದಿದ್ದ ಅವರ ಚಿತ್ರಕಲೆಗಳು ದು:ಖಾಂತದ ಪರಿಕಲ್ಪನೆಯನ್ನು ಹೊಂದಿದ್ದವು. ವೆನಿಸ್‌ನಲ್ಲಿ ನಡೆದ ಭಾರತದ ಪ್ರಪ್ರಥಮ ಚಿತ್ರಕಲಾ ಪ್ರದರ್ಶನದಲ್ಲಿ ಅವರನ್ನು ನನ್ನ ಕಲಾವಿದರ ತಂಡದಲ್ಲಿ ಒಬ್ಬರಾಗಿ ಹೊಂದಲು ನನಗೆ ಅವಕಾಶ ದೊರಕಿತ್ತು ಎಂದು ಹೊಸ್ಕೋಟೆ ಟ್ವೀಟ್ ಮಾಡಿದ್ದಾರೆ.
ಉತ್ತರಪ್ರದೇಶದ ಆಲಿಗಢದಲ್ಲಿ 1937ರಲ್ಲಿ ಜನಿಸಿದ ಝರೀನಾ, ಆ ಕಾಲದಲ್ಲಿದ್ದ ಭಾರತದ ಕೆಲವೇ ಮಹಿಳಾ ಚಿತ್ರಕಲಾವಿದೆಯರಲ್ಲಿ ಒಬ್ಬರಾಗಿದ್ದರು. ಕನಿಷ್ಟ ರೇಖಾಚಿತ್ರದಿಂದ ಚಿತ್ರಕಲೆ , ಶಿಲ್ಪಕೃತಿ ಹೀಗೆ ವಿಭಿನ್ನ ಆಯಾಮದಲ್ಲಿ ಅವರು ಮನೆ ಮತ್ತು ದೂರದ ಕಲ್ಪನೆಯನ್ನು ಸುಂದರವಾಗಿ ಅಭಿವ್ಯಕ್ತಗೊಳಿಸಿದ್ದರು. ದೇಶ ವಿಭಜನೆ, ನಾಗರಿಕರ ವಲಸೆ, ಮನೆಯನ್ನು ಕಳೆದುಕೊಳ್ಳುವುದು ಅವರ ಚಿತ್ರಕಲೆಯಲ್ಲಿ ಪುನರಾವರ್ತನೆಯಾಗುತ್ತಿರುವ ವಿಷಯಗಳಾಗಿದ್ದವು. ಇಸ್ಲಾಮಿಕ್ ವಾಸ್ತುಶಿಲ್ಪದಲ್ಲಿ ಕಂಡು ಬರುವ ನಿಯಮಿತ ಜ್ಯಾಮಿತಿ(ರೇಖಾಗಣಿತ)ಯನ್ನೂ ಅವರ ಕಲಾಕೃತಿಯಲ್ಲಿ ಬಳಸಿಕೊಳ್ಳಲಾಗಿದೆ.
ಹೋಮ್ ಈಸ್ ಎ ಫಾರಿನ್ ಪ್ಲೇಸ್, ಟಿಯರ್ಸ್ ಆಫ್ ದಿ ಸೀ, ಲೆಟರ್ಸ್ ಫ್ರಂ ದಿ ಹೋಮ್ ಅವರ ಪ್ರಸಿದ್ಧ ಕಲಾಕೃತಿಗಳಾಗಿವೆ. ಅವರ ಕಲಾಕೃತಿಗಳು ಅಮೆರಿಕದ ಹ್ಯಾಮರ್ ಮ್ಯೂಸಿಯಂ, ಮ್ಯೂಸಿಯಂ ಆಫ್ ,ಮೋಡರ್ನ್ ಆರ್ಟ್ , ಲಂಡನ್‌ನ ವಿಕ್ಟೋರಿಯಾ ಆ್ಯಂಡ್ ಆಲ್ಬರ್ಟ್ ಮ್ಯೂಸಿಯಂ ಸಹಿತ ವಿಶ್ವದ ವಿವಿಧೆಡೆ ನಡೆದ ಚಿತ್ರಕಲಾ ಪ್ರದರ್ಶನದಲ್ಲಿ ಪ್ರದರ್ಶನಗೊಂಡಿವೆ.