ಯುಎಇ: ಸೋಂಕಿತರ ಸಂಖ್ಯೆ 10,349ಕ್ಕೇರಿಕೆ
ಅಬುದಾಬಿ,ಎ.26: ಯುಎಇನಲ್ಲಿ 536 ಹೊಸ ಕೊರೋನ ಸೋಂಕಿನ ಪ್ರಕರಣಗಳು ರವಿವಾರ ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 10,349ಕ್ಕೇರಿದೆಯೆಂದು ಆರೋಗ್ಯ ಹಾಗೂ ಪ್ರತಿಬಂಧಕ (ಎಂ ಓ ಎ ಪ್‌ಪಿ) ಸಚಿವಾಲಯ ರವಿವಾರ ತಿಳಿಸಿದೆ.
ರವಿವಾರ ಐವರು ಸೋಂಕಿಗೆ ಬಲಿಯಾಗಿದ್ದಾರೆ ಹಾಗೂ ಅವರೆಲ್ಲರೂ ವಿವಿಧ ದೇಶಗಳ ಪ್ರಜೆಗಳಾಗಿದ್ದಾರೆ ಹಾಗೂ ದೀರ್ಘಕಾಲದ ಅಸೌಖ್ಯದಿಂದ ಬಳಲುತ್ತಿದ್ದರು. ಸೋಂಕಿನಿಂದಾಗಿ ಆರೋಗ್ಯ ಬಿಗಡಾಯಿಸಿ ಅವರು ಅಸುನೀಗಿದ್ದಾರೆಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಸೋಂಕಿತರ ಪೈಕಿ 91 ಮಂದಿ ಸೂಕ್ತ ಚಿಕಿತ್ಸೆ ಪಡೆದ ಬಳಿಕ ಗುಣಮುಖಗೊಂಡಿದ್ದು, ರವಿವಾರ ಬಿಡುಗಡೆಯಾಗಿದ್ದಾರೆಂದು ಅದು ಹೇಳಿದೆ. ಇದರೊಂದಿಗೆ ಯುಇಎಲ್ಲಿ ಈವರೆಗೆ ರೋಗಮುಕ್ತರಾದವರ ಸಂಖ್ಯೆ 1978ಕ್ಕೇರಿದೆ. ಹೊಸತಾಗಿ ಸೋಂಕು ದೃಢಪಟ್ಟವರೆಲ್ಲರ ಆರೋಗ್ಯ ಸ್ಥಿರವಾಗಿದ್ದು ಅವರಿಗೆ ಸೂಕ್ತವಾದ ಚಿಕಿತ್ಸೆ ನೀಡಲಾಗುತ್ತಿದೆ. ಯುಎಇ ನಾಗರಿಕರು ಹಾಗೂ ನಿವಾಸಿಳು ಸೇರಿದಂತೆ 35 ಸಾವಿರಕ್ಕೂ ಅಧಿಕ ಮಂದಿಗೆ ಕಳೆದ ಕೆಲವು ದಿನಗಳಿಂದ ಕೋವಿಡ್-19 ತಪಾಸಣೆಗಳನ್ನು ನಡೆಸಲಾಗುತ್ತಿದೆಯೆಂದು ಸಚಿವಾಲಯ ತಿಳಿಸಿದೆ.
ಸೋಂಕಿನಿಂದ ಮೃತಪಟ್ಟವರ ಕುಟುಂಬಗಳಿಗೆ ಸಂತಾಪ ವ್ಯಕ್ತಪಡಿಸಿರವ ಸಚಿವಾಲಯವು ಸಾರ್ವಜನಿಕರು ಸುರಕ್ಷಿತ ಅಂತರ ಕಾಯ್ದುಕೊಳ್ಳುವಿಕೆ ಸೇರಿದಂತೆ ಸೋಂಕು ಹರಡುವಿಕೆ ವಿರುದ್ಧ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆದಂದು ಸಚಿವಾಲಯ ಮನವಿ ಮಾಡಿದೆ.





