ಅಧಿಕಾರ ಸ್ವೀಕಾರಕ್ಕೆ 4,000 ಕಿಲೋಮೀಟರ್ ಕಾರು ಚಾಲನೆ ಮಾಡಿದ ನ್ಯಾಯಮೂರ್ತಿಗಳು !
ಕೊಲ್ಕತ್ತಾ : ದೇಶಾದ್ಯಂತ ಲಾಕ್ಡೌನ್ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಎರಡು ಹೈಕೋರ್ಟ್ಗಳ ಮುಖ್ಯ ನ್ಯಾಯಮೂರ್ತಿಗಳಾಗಿ ಅಧಿಕಾರ ಸ್ವೀಕರಿಸಲು ನ್ಯಾಯಮೂರ್ತಿಗಳಿಬ್ಬರು 4,000 ಕಿಲೋಮೀಟರ್ ಕಾರು ಚಾಲನೆ ಮಾಡಿಕೊಂಡು ಹೋದ ಘಟನೆ ವರದಿಯಾಗಿದೆ.
ಕೊಲ್ಕತ್ತಾ ಹೈಕೋರ್ಟ್ನ ನ್ಯಾಯಮೂರ್ತಿ ದೀಪಂಕರ್ ದತ್ತ ಅವರು ಮುಂಬೈ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಲು ಮತ್ತು ಅಲಹಾಬಾದ್ ಹೈಕೋರ್ಟ್ನ ನ್ಯಾಯಮೂರ್ತಿ ಬಿಸ್ವನಾಥ್ ಸೋಮದ್ದೆರ್ ಮೇಘಾಲಯ ಹೈಕೋರ್ಟ್ ಮುಖ್ಯ ನ್ಯಾಯ ಮೂರ್ತಿಯಾಗಿ ಅಧಿಕಾರ ಸ್ವೀಕರಿಸಲು ಶಿಲ್ಲಾಂಗ್ಗೆ ಕಾರಿನಲ್ಲಿ ಪ್ರಯಾಣಿಸಬೇಕಾಯಿತು. ನ್ಯಾಯಮೂರ್ತಿ ದತ್ತ ಅವರು ಸೋಮವಾರ ಸಂಜೆ ಮುಂಬೈ ತಲುಪುವ ನಿರೀಕ್ಷೆ ಇದ್ದು, ಮಂಗಳವಾರ ಅಧಿಕಾರ ವಹಿಸಿಕೊಳ್ಳುವರು.
ನ್ಯಾಯಮೂರ್ತಿ ಸೋಮದ್ದರ್ ಅವರನ್ನು ವರ್ಗಾವಣೆ ಮಾಡಿ ರಾಷ್ಟ್ರಪತಿಗಳು ನೀಡಿರುವ ಆದೇಶ ಶುಕ್ರವಾರ ಸಂಜೆ ಕೈ ತಲುಪುತ್ತಿದ್ದಂತೇ ಅಲಹಾಬಾದ್ ನಿಂದ 800 ಕಿಲೋಮೀಟರ್ ದೂರದ ಕೊಲ್ಕತ್ತಾಗೆ ಪ್ರಯಾಣ ಆರಂಭಿಸಿದರು. ಶನಿವಾರ ಸಂಜೆ ಕೊಲ್ಕತ್ತಾ ತಲುಪಿದ ಅವರು ಅಲ್ಪಕಾಲ ವಿರಾಮ ಪಡೆದು 1110 ಕಿಲೋಮೀಟರ್ ದೂರದ ಶಿಲ್ಲಾಂಗ್ಗೆ ರಾತ್ರಿ 7.30ಕ್ಕೆ ಪ್ರಯಾಣ ಆರಂಭಿಸಿದರು. ಇವರು ಸ್ವತಃ ಚಾಲನೆ ಮಾಡುವ ಜತೆಗೆ ಚಾಲಕನ ನೆರವನ್ನೂ ಪಡೆಯುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.
ಅಂತೆಯೇ ನ್ಯಾಯಮೂರ್ತಿ ದತ್ತ ಅವರು ಕ್ರಮಿಸಬೇಕಾದ ದೂರ 2200 ಕಿಲೋಮೀಟರ್. ಈ ಸುಧೀರ್ಘ ಅಂತರ ಕ್ರಮಿಸಲು ತಾವು ಚಾಲನೆ ಮಾಡುವ ಜತೆಗೆ ಮಗನ ನೆರವನ್ನೂ ಪಡೆಯುತ್ತಿದ್ದಾರೆ.