ಹಾಟ್‌ಸ್ಪಾಟ್‌ಗಳಲ್ಲಿ ಲಾಕ್ ಡೌನ್ ಮುಂದುವರಿಕೆ : ಪ್ರಧಾನಿ ಮೋದಿ

ಹೊಸದಿಲ್ಲಿ, ಎ.27: ಕಳೆದ ಒಂದೂವರೆ ತಿಂಗಳಲ್ಲಿ ಸಾವಿರಾರು ಜೀವಗಳನ್ನು ರಕ್ಷಿಸುವಲ್ಲಿ ದೇಶವು ಸಫಲವಾಗಿದ್ದು, ಲಾಕ್‌ಡೌನ್ ಧನಾತ್ಮಕ ಫಲಿತಾಂಶಗಳನ್ನು ನೀಡಿದೆ ಎಂದು ಸೋಮವಾರ ಇಲ್ಲಿ ಹೇಳಿದ ಪ್ರಧಾನಿ ನರೇಂದ್ರ ಮೋದಿ ಅವರು, ಆರ್ಥಿಕತೆಗೆ ಮಹತ್ವ ನೀಡುವ ಅಗತ್ಯಕ್ಕೂ ಒತ್ತು ನೀಡಿದರು.
ಲಾಕ್‌ಡೌನ್ ಅಂತ್ಯಗೊಂಡ ಬಳಿಕ ಕೊರೋನ ವೈರಸ್ ಬಿಕ್ಕಟ್ಟನ್ನು ಎದುರಿಸಲು ಅಗತ್ಯ ಕಾರ್ಯತಂತ್ರಗಳನ್ನು ಚರ್ಚಿಸಲು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದ ಮೋದಿ, ಮಾರ್ಚ್ ತಿಂಗಳ ಆರಂಭದಲ್ಲಿ ಭಾರತ ಸೇರಿದಂತೆ ಹಲವಾರು ದೇಶಗಳಲ್ಲಿ ಕೋವಿಡ್-10 ಪರಿಸ್ಥಿತಿ ಹೆಚ್ಚುಕಡಿಮೆ ಒಂದೇ ಆಗಿತ್ತು. ಆದರೆ ಭಾರತವು ಸಕಾಲಿಕ ಕ್ರಮಗಳ ಮೂಲಕ ಹಲವಾರು ಜನರನ್ನು ರಕ್ಷಿಸುವಲ್ಲಿ ಸಫಲವಾಗಿದೆ ಎಂದು ಹೇಳಿದರು.
ಕೊರೋನ ವೈರಸ್ ಅಪಾಯ ಇನ್ನೂ ದೂರವಾಗಿಲ್ಲ ಮತ್ತು ನಿರಂತರ ಕಟ್ಟೆಚ್ಚರ ಅತ್ಯಂತ ಮಹತ್ವದ್ದಾಗಿದೆ ಎಂದು ಎಚ್ಚರಿಕೆಯನ್ನೂ ನೀಡಿದರು.
ಹಾಟ್‌ಸ್ಪಾಟ್ ಪ್ರದೇಶಗಳಲ್ಲಿ ಲಾಕ್‌ಡೌನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಮುಖ್ಯಮಂತ್ರಿಗಳಿಗೆ ನಿರ್ದೇಶ ನೀಡಿದ ಅವರು, ಹೆಚ್ಚಿನ ಕೋವಿಡ್-19 ಪ್ರಕರಣಗಳಿರುವ ಕೆಂಪು ವಲಯವನ್ನು ಕಿತ್ತಳೆ ವಲಯವನ್ನಾಗಿ ಮತ್ತು ಅಂತಿಮವಾಗಿ ಹಸಿರು ವಲಯವನ್ನಾಗಿ ಪರಿವರ್ತಿಸಲು ರಾಜ್ಯಗಳು ಶ್ರಮಿಸಬೇಕು ಎಂದರು.
ಕೊರೋನ ವೈರಸ್ ಪಿಡುಗಿನ ಪರಿಣಾಮ ಸುದೀರ್ಘ ಕಾಲ ಇರಲಿದೆ ಎಂದ ಮೋದಿ ‘ದೋ ಗಜ್ ದೂರಿ’ ಮಂತ್ರವನ್ನು ಪುನರುಚ್ಚರಿಸಿದರು. ಮುಂಬರುವ ದಿನಗಳಲ್ಲಿ ಮಾಸ್ಕ್‌ಗಳು ಮತ್ತು ಮುಖ ಮುಸುಕುಗಳು ನಮ್ಮ ಬದುಕಿನ ಭಾಗವಾಗಿರಲಿವೆ ಎಂದರು.
ಹೆಚ್ಚುತ್ತಿರುವ ಕೊರೋನ ವೈರಸ್ ಬಿಕ್ಕಟ್ಟಿನ ನಡುವೆಯೇ ಆರ್ಥಿಕತೆಯ ಮೇಲೆ ಗಮನವನ್ನು ಕೇಂದ್ರೀಕರಿಸುವ ಅಗತ್ಯಕ್ಕೆ ಒತ್ತು ನೀಡಿದ ಅವರು, ಕೋವಿಡ್-19ರ ವಿರುದ್ಧ ಹೋರಾಟ ಮುಂದುವರಿಸುವ ಜೊತೆಗೆ ಆರ್ಥಿಕತೆಗೂ ನಾವು ಮಹತ್ವ ನೀಡಬೇಕಿದೆ ಎಂದರು.
ಹಾಟ್‌ಸ್ಪಾಟ್ ಅಲ್ಲದ ಪ್ರದೇಶಗಳಲ್ಲಿ ಮಾತ್ರ ಸಡಿಲಿಕೆಗಳೊಂದಿಗೆ ದೇಶವ್ಯಾಪಿ ಲಾಕ್‌ಡೌನ್ ಅನ್ನು ಮೇ 3ರ ನಂತರವೂ ಮುಂದುವರಿಸುವಂತೆ ಸಭೆಯಲ್ಲಿ ಪಾಲ್ಗೊಂಡಿದ್ದ ಮೇಘಾಲಯದ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಸೂಚಿಸಿದರು. ಲಾಕ್‌ಡೌನ್ ಮುಂದುವರಿಕೆಗೆ ಇತರ ಹಲವು ಮುಖ್ಯಮಂತ್ರಿಗಳೂ ಒಲವು ವ್ಯಕ್ತಪಡಿಸಿದರು.







