‘ಅಮಿತಾಭ್ ಬಚ್ಚನ್ ರ ವಾಟ್ಸ್ಯಾಪ್ ರದ್ದುಗೊಳಿಸಿ’: 1,300 ಜನರಿಂದ ಆನ್ ಲೈನ್ ಅರ್ಜಿ ಆಂದೋಲನ
ಕಾರಣವೇನು ಗೊತ್ತಾ?

ಮುಂಬೈ: ಬಾಲಿವುಡ್ ನ ಹಿರಿಯ ನಟ ಅಮಿತಾಭ್ ಬಚ್ಚನ್ ಅವರ ಫೋನ್ ನಲ್ಲಿ ವಾಟ್ಸ್ಯಾಪ್ ಡಿಸೇಬಲ್ ಮಾಡಬೇಕೆಂದು ಫೇಸ್ ಬುಕ್ ಸಿಇಒ ಮಾರ್ಕ್ ಝುಕರ್ ಬರ್ಗ್ ಅವರನ್ನು ಕೋರುವ ಆನ್ ಲೈನ್ ಅರ್ಜಿ ಆಂದೋಲನ ನಡೆಸಲಾಗುತ್ತಿದ್ದು, ಈಗಾಗಲೇ 1,300ಕ್ಕೂ ಅಧಿಕ ಜನರು ಬೆಂಬಲ ನೀಡಿದ್ದಾರೆ.
ಅಮಿತಾಭ್ ಬಚ್ಚನ್ ಅವರು ನಕಲಿ ಸುದ್ದಿಗಳಿಗೆ ಬಲಿ ಬೀಳುತ್ತಿರುವುದರಿಂದ ಅವರ ಘನತೆಯನ್ನು ಕಾಪಾಡುವ ದೃಷ್ಟಿಯಿಂದ ಅವರ ವಾಟ್ಸ್ಯಾಪ್ ಅನ್ನು ಡಿಸೇಬಲ್ ಗೊಳಿಸಲು ಮನವಿ ಮಾಡಲಾಗಿದೆ ಎಂದು ಹೇಳಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಈ ಹಿಂದೆ ಘೋಷಿಸಿದ್ದ ಜನತಾ ಕರ್ಫ್ಯೂ ಸಂದರ್ಭ ಟ್ವೀಟ್ ಮಾಡಿದ್ದ ಅಮಿತಾಭ್ ಇದು ಅಮಾವಾಸ್ಯೆಯ ಸಂದರ್ಭ ಆಗಿದೆ ಹಾಗೂ ಈ ಸಂದರ್ಭ ಚಪ್ಪಾಳೆ ಹೊಡೆಯುವುದರಿಂದ ವೈರಸ್ ಅನ್ನು ನಾಶಗೊಳಿಸಬಹುದು ಎಂದಿದ್ದರು. ಇದು ಸುಳ್ಳು ಸುದ್ದಿ ಎಂದು ಹಲವರು ಎಚ್ಚರಿಸಿದ ಬಳಿಕ ಅಮಿತಾಭ್ ಈ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದರು.
ಕೊರೋನವೈರಸ್ ಮನುಷ್ಯರ ಮಲದಲ್ಲಿ ವಾರಗಳ ಕಾಲ ಜೀವಂತವಾಗಿರುತ್ತದೆ ಎಂಬ ಇನ್ನೊಂದು ಸುದ್ದಿಯನ್ನೂ ಅವರು ಶೇರ್ ಮಾಡಿದ್ದರು. ಈ ವಿಚಾರವನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಪತ್ರಿಕಾಗೋಷ್ಠಿಯಲ್ಲಿ ಅಲ್ಲಗಳೆದ ನಂತರ ತಮ್ಮ ಈ ಕುರಿತಾದ ಪೋಸ್ಟ್ ಅನ್ನೂ ಅಮಿತಾಭ್ ಡಿಲಿಟ್ ಮಾಡಿದ್ದರು.





