ಮಹೇಂದ್ರ ಕುಮಾರ್ ರಿಗೆ ಶ್ರದ್ಧಾಂಜಲಿ ಅರ್ಪಿಸಲು ಇಂದು ರಾತ್ರಿ 8 ಗಂಟೆಗೆ ಮನೆ ಮುಂದೆ ದೀಪ ಹಚ್ಚಿ
'ನಮ್ಮ ಧ್ವನಿ' ಬಳಗ ಕರೆ

ಚಿಕ್ಕಮಗಳೂರು, ಎ.27: ಇತ್ತೀಚಿಗೆ ಹೃದಯಾಘಾತದಿಂದ ನಿಧನರಾದ ಬಜರಂಗದಳ ಮಾಜಿ ರಾಜ್ಯ ಸಂಚಾಲಕ, ಚಿಂತಕ, ಸಾಮಾಜಿಕ ಕಾರ್ಯಕರ್ತ ಮಹೇಂದ್ರ ಕುಮಾರ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲು ಇಂದು (ಎ.27) ರಾತ್ರಿ 8 ಗಂಟೆಗೆ ಮನೆ ಮುಂದೆಯೇ ದೀಪ/ಕ್ಯಾಂಡಲ್ ಹಚ್ಚಿ ಪ್ರಾರ್ಥಿಸಲು 'ನಮ್ಮ ಧ್ವನಿ' ಬಳಗ ಕರೆ ನೀಡಿದೆ.
ಈ ಬಗ್ಗೆ ಫೇಸ್ ಬುಕ್ ಪೋಸ್ಟ್ ನಲ್ಲಿ ಬರೆದಿರುವ ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅವರು, "ನಮ್ಮನಗಲಿದ ಮಹೇಂದ್ರ ಕುಮಾರ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲು ಇಂದು ರಾತ್ರಿ 8 ಗಂಟೆಗೆ ನಮ್ಮ ಮನೆ ಮುಂದೆಯೇ ದೀಪ/ಕ್ಯಾಂಡಲ್ ಹಚ್ಚಿ ಪ್ರಾರ್ಥಿಸಲು ಮಹೇಂದ್ರಕುಮಾರ್ ಅವರು ಕಟ್ಟಿರುವ 'ನಮ್ಮ ಧ್ವನಿ' ಬಳಗ ಮತ್ತು ಗೆಳೆಯರು ನಿರ್ಧರಿಸಿದ್ದಾರೆ. ನಾವೆಲ್ಲರೂ ಇದರಲ್ಲಿ ಪಾಲ್ಗೊಳ್ಳೋಣ" ಎಂದು ತಿಳಿಸಿದ್ದಾರೆ.
ಮಹೇಂದ್ರ ಕುಮಾರ್ ಎನ್ನುವುದು ಶರೀರವಲ್ಲ, ಅದೊಂದು ಕನಸು. ಇಂದು ರಾತ್ರಿ 8 ಗಂಟೆಗೆ ಒಂದು ದೀಪ/ಕ್ಯಾಂಡಲ್ ಹಚ್ಚುವುದರ ಜೊತೆಗೆ ಪ್ರಾರ್ಥನೆ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಮಹೇಂದ್ರ ಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸೋಣ ಎಂದು ಅವರು ವಿನಂತಿಸಿದ್ದಾರೆ.
ಪ್ರಪಂಚದಾದ್ಯಂತ ಬೇರೆ ಬೇರೆ ದೇಶಗಳಲ್ಲಿ ಮಹೇಂದ್ರ ಕುಮಾರ್ ಅವರನ್ನು ಪ್ರೀತಿಸುತ್ತಿದ್ದ ಹಾಗೂ ಅವರ ಹೋರಾಟವನ್ನು ಗೌರವಿಸುತ್ತಿದ್ದ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಈ ಲಾಕ್ ಡೌನ್ ಕಾರಣದಿಂದ ಕೆಲವೇ ಸ್ನೇಹಿತರನ್ನು ಹೊರತುಪಡಿಸಿ ಉಳಿದ ಯಾರಿಗೂ ಅವರ ಅಂತಿಮ ದರ್ಶನವಾಗಲಿಲ್ಲ ಎನ್ನುವುದು ಬೇಸರದ ಸಂಗತಿ. ಆ ಕಾರಣಕ್ಕಾಗಿ ಇವತ್ತು ರಾತ್ರಿ 8 ಗಂಟೆಗೆ ಅವರನ್ನು ಪ್ರೀತಿಸುತ್ತಿದ್ದ, ಗೌರವಿಸುತ್ತಿದ್ದ, ಹಾಗೂ ಅವರ ಹೋರಾಟವನ್ನು ಒಪ್ಪುತ್ತಿದ್ದ ಎಲ್ಲರೂ ಕೂಡ ನಮ್ಮ ನಮ್ಮ ಮನೆಗಳಲ್ಲಿ ಒಂದು ದೀಪ/ಕ್ಯಾಂಡಲ್ ಬೆಳಗುವುದರ ಮೂಲಕ ಅವರಿಗೆ ಶ್ರದ್ಧಾಂಜಲಿ ಸಲ್ಲಿಸೋಣ ಎನ್ನುವುದು ನಮ್ಮ ಆಶಯ. ಸರಿಯಾಗಿ 8 ಗಂಟೆಗೆ ಎಲ್ಲರೂ ಕೂಡ ದೀಪ ಹಚ್ಚುವುದರ ಜೊತೆಗೆ ಪ್ರಾರ್ಥನೆ ಸಲ್ಲಿಸಿ ಆ ಫೋಟೋ ಗಳನ್ನು ಒಂದೇ ಸಮಯಕ್ಕೆ ಫೇಸ್ಬುಕ್, ವಾಟ್ಸಾಪ್, ಟ್ವಿಟ್ಟರ್ ಹಾಗು ಇತರ ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದರ ಮುಖಾಂತರ ಮಹೇಂದ್ರ ಕುಮಾರ್ ಅವರಿಗೆ ಗೌರವ ಸಲ್ಲಿಸೋಣ ಹಾಗು ಅವರ ಸಾವನ್ನು ಸಂಭ್ರಮಿಸುತ್ತಿರುವ ಅಲ್ಪಮತಿಗಳ ಹೃದಯದಲ್ಲಿ ದ್ವೇಷ ಅಳಿದು ಪ್ರೀತಿಯ ದೀಪ ಬೆಳಗಿಸುವ ಪ್ರಯತ್ನ ಪಡೋಣ ಎಂದು ದಿನೇಶ್ ಅಮೀನ್ ಮಟ್ಟು ತಿಳಿಸಿದ್ದಾರೆ.







