'ಅನುಗ್ರಹ ಯೋಜನೆ'ಗೆ ಅನುದಾನ ನಿಗದಿಪಡಿಸಲು ಸಿದ್ದರಾಮಯ್ಯ ಒತ್ತಾಯ

ಬೆಂಗಳೂರು, ಎ. 27: ಕುರಿ-ಮೇಕೆ ಆಕಸ್ಮಿಕವಾಗಿ ಸತ್ತರೆ ಪರಿಹಾರ ನೀಡುವ 'ಅನುಗ್ರಹ ಯೋಜನೆ'ಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸದೆ, ಈ ಹಣಕಾಸು ವರ್ಷದಲ್ಲಿ ಅನುದಾನ ನಿಗದಿ ಮಾಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ, ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಸೋಮವಾರ ಪತ್ರದ ಮೂಲಕ ಆಗ್ರಹಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲೂಕಿನ ವೇಣಕಲ್ಲುಗುಡ್ಡದ ಬಳಿ ಕರಬೂಜ ಹಣ್ಣು ಹಾಗೂ ಬಳ್ಳಿಯನ್ನು ತಿಂದು ರಾಮಕೃಷ್ಣಪ್ಪ ಎಂಬ ಕುರಿಗಾರರಿಗೆ ಸೇರಿದ ಸುಮಾರು 60 ಕುರಿಗಳು ಹೊಟ್ಟೆ ಒಡೆದು ಸತ್ತಿವೆ. ಈ ರೀತಿಯ ಪ್ರಕರಣಗಳು ರಾಜ್ಯಾದ್ಯಂತ ಸಂಭವಿಸುತ್ತಿವೆ. ಇದರಿಂದ ಪಶುಪಾಲಕರು ತೀವ್ರ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ ಎಂದು ಸಿದ್ದರಾಮಯ್ಯ ಸರಕಾರದ ಗಮನ ಸೆಳೆದಿದ್ದಾರೆ.
ನಮ್ಮ ಸರಕಾರದ ಅವಧಿಯಲ್ಲಿ ಆಕಸ್ಮಿಕವಾಗಿ ಕುರಿ, ಮೇಕೆ, ಹಸು, ಎಮ್ಮೆ, ಎತ್ತು ಮುಂತಾದ ಜಾನುವಾರುಗಳು ಸತ್ತರೆ ಗರಿಷ್ಠ 10 ಸಾವಿರ ರೂ.ಪರಿಹಾರ ನೀಡುವ ಅನುಗ್ರಹ ಯೋಜನೆ ಜಾರಿಗೆ ತಂದಿದ್ದೆವು. ಇದು ಪರಿಣಾಮಕಾರಿಯಾಗಿತ್ತು. ಇದರಿಂದ ಪಶು ಪಾಲಕರಿಗೆ ಸಣ್ಣದೊಂದು ಭದ್ರತೆಯ ಭರವಸೆ ಇತ್ತು.
ಈ ಯೋಜನೆಗೆ ನೂರಾರು ಕೋಟಿ ರೂ. ಅನುದಾನದ ಅವಶ್ಯಕತೆಯೂ ಇರುವುದಿಲ್ಲ. ಹೀಗಾಗಿ ಯಾವುದೇ ಕಾರಣಕ್ಕೂ ಅನುಗ್ರಹ ಯೋಜನೆ ನಿಲ್ಲಿಸಿ ಪಶುಪಾಲಕರ ವಿರೋಧಿ ನಿಲುವನ್ನು ಸರಕಾರ ತೆಗೆದುಕೊಳ್ಳಬಾರದು. ರಾಮಕೃಷ್ಣಪ್ಪ ಮುಂತಾದ ಪಶುಪಾಲಕರಿಗೆ ಪರಿಹಾರವನ್ನು ತುತ್ತಾಗಿ ನೀಡಬೇಕು ಎಂದು ಸಿದ್ಧರಾಮಯ್ಯ ಪತ್ರದಲ್ಲಿ ಒತ್ತಾಯಿಸಿದ್ದಾರೆ.







