ಉಡುಪಿ: ಸೋಮವಾರ 15 ಮಂದಿ ಗಂಟಲು ದ್ರವ ಪರೀಕ್ಷೆಗೆ
ಉಡುಪಿ, ಎ.27: ನೋವೆಲ್ ಕೊರೋನ ವೈರಸ್ (ಕೋವಿಡ್-19)ನ ಗುಣಲಕ್ಷಣಗಳೊಂದಿಗೆ ಜಿಲ್ಲೆಯ ವಿವಿಧ ಆಸ್ಪತ್ರೆಗಳಿಗೆ ದಾಖಲಾದ ಇನ್ನೂ 15 ಮಂದಿಯ ಗಂಟಲು ದ್ರವ ಮಾದರಿಯನ್ನು ಸೋಮವಾರ ಸಂಗ್ರಹಿಸಿ ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.
ಇಂದು ಕಳುಹಿಸಿದ 15 ಗಂಟಲು ದ್ರವ ಸ್ಯಾಂಪಲ್‌ಗಳಲ್ಲಿ ಎರಡು ಕೋವಿಡ್ ಶಂಕಿತರದ್ದಾದರೆ, ಐದು ತೀವ್ರ ಉಸಿರಾಟದ ತೊಂದರೆಯಿದ್ದ ವರದ್ದಾಗಿದೆ. ಇವುಗಳೊಂದಿಗೆ ಎಂಟು ಮಂದಿ ಶೀತಜ್ವರದಿಂದ ಬಳಲುತ್ತಿರುವವರ ಸ್ಯಾಂಪಲ್‌ಗಳನ್ನು ಸಹ ಕೊರೋನ ಸೋಂಕಿನ ಪರೀಕ್ಷೆಗೆ ಕಳುಹಿಸಲಾಗಿದೆ ಎಂದವರು ತಿಳಿಸಿದರು.
ಪರೀಕ್ಷೆಗಾಗಿ ಉಡುಪಿ ಜಿಲ್ಲೆಯಿಂದ ಈವರೆಗೆ ಬಾಕಿ ಇದ್ದ 41 ಮಂದಿಯ ಗಂಟಲು ದ್ರವದ ಸ್ಯಾಂಪಲ್‌ಗಳಲ್ಲಿ ಇಂದು 16 ಮಂದಿಯ ವರದಿ ಬಂದಿದ್ದು, ಎಲ್ಲವೂ ನೆಗೆಟಿವ್ ಆಗಿವೆ. ಹೀಗಾಗಿ ಸೋಮವಾರ ಪರೀಕ್ಷೆಗೆ ಕಳುಹಿಸಿದ 15 ಸ್ಯಾಂಪಲ್‌ಗಳು ಸೇರಿದಂತೆ ಇನ್ನು ಒಟ್ಟು 40 ವರದಿ ಬರಬೇಕಾಗಿದೆ ಎಂದರು.
ಇಂದು ಎಂಟು ಮಂದಿ ಹೊಸದಾಗಿ ಕೋವಿಡ್-19 ರೋಗಲಕ್ಷಣದೊಂದಿಗೆ ಐಸೋಲೇಷನ್ ವಾರ್ಡಿಗೆ ಸೇರ್ಪಡೆಗೊಂಡಿದ್ದಾರೆ. ಐವರು ಪುರುಷರು ಹಾಗೂ ಮೂವರು ಮಹಿಳೆಯರಲ್ಲಿ ಏಳು ಮಂದಿ ತೀವ್ರ ಉಸಿರಾಟದ ತೊಂದರೆಗೆ ಹಾಗೂ ಒಬ್ಬರು ಶೀತಜ್ವರ ಬಾಧೆಗೆ ದಾಖಲಾ ಗಿದ್ದಾರೆ. ಇಂದು 17 ಮಂದಿ ಐಸೋಲೇಷನ್ ವಾರ್ಡಿನಿಂದ ಬಿಡುಗಡೆಗೊಂಡಿದ್ದು, ಒಟ್ಟಾರೆ ಯಾಗಿ 308 ಮಂದಿ ಈವರೆಗೆ ಬಿಡುಗಡೆ ಗೊಂಡಿದ್ದಾರೆ. ಈಗ 47 ಮಂದಿ ಐಸೋಲೇಷನ್ ವಾರ್ಡಿನಲ್ಲಿ ನಿಗಾದಲ್ಲಿದ್ದಾರೆ ಎಂದು ಡಾ.ಸೂಡ ತಿಳಿಸಿದರು.
ಜಿಲ್ಲೆಯಿಂದ ಇದುವರೆಗೆ ಒಟ್ಟು 1068 ಮಂದಿಯ ಸ್ಯಾಂಪಲ್‌ಗಳನ್ನು ಸೋಂಕಿನ ಪರೀಕ್ಷೆಗಾಗಿ ಪಡೆಯಲಾಗಿದೆ. ಇವುಗಳಲ್ಲಿ 1025 ಸ್ಯಾಂಪಲ್ ನೆಗೆಟಿವ್ ಆಗಿದ್ದರೆ, ಮೂವರದ್ದು ಮಾತ್ರ ಪಾಸಿಟಿವ್ ಆಗಿವೆ. ಪಾಸಿಟಿವ್ ಆಗಿದ್ದವರೆಲ್ಲರೂ ಚಿಕಿತ್ಸೆಯಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆ ಗೊಂಡಿದ್ದಾರೆ.
ಜಿಲ್ಲೆಯಲ್ಲಿ ವಿವಿಧ ಕಾರಣಗಳಿಗಾಗಿ ಇಂದು 11ಮಂದಿಯನ್ನು ಹೊಸದಾಗಿ ನೋಂದಣಿ ಮಾಡಿಕೊಳ್ಳಲಾಗಿದೆ. ಈ ಮೂಲಕ ಇದುವರೆಗೆ ಜಿಲ್ಲೆ ಯಲ್ಲಿ ಒಟ್ಟು 3347 ಮಂದಿ ತಪಾಸಣೆಗಾಗಿ ನೋಂದಣಿ ಮಾಡಿಕೊಂಡಂತಾಗಿದೆ. ಇವರಲ್ಲಿ 2052 (ಇಂದು 36) ಮಂದಿ 28 ದಿನಗಳ ನಿಗಾ ಪೂರೈಸಿದ್ದರೆ, 2752 (64) ಮಂದಿ 14 ದಿನಗಳ ನಿಗಾವನ್ನು ಪೂರ್ಣ ಗೊಳಿಸಿದ್ದಾರೆ. ಒಟ್ಟು 521 ಮಂದಿ ಇನ್ನೂ ಹೋಮ್ ಕ್ವಾರಂಟೈನ್ ಹಾಗೂ 27 ಮಂದಿ ಆಸ್ಪತ್ರೆ ಕ್ವಾರಂಟೈನ್ ನಲ್ಲಿದ್ದಾರೆ. ಮೂವರನ್ನು ಇಂದು ಬಿಡುಗಡೆಗೊಳಿಸಲಾಗಿದೆ ಎಂದು ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.







