ವಲಸೆ ಕಾರ್ಮಿಕರು ಊರುಗಳಿಗೆ ಮರಳಲು ಅವಕಾಶ ಕೋರಿರುವ ಅರ್ಜಿ: ಉತ್ತರಿಸುವಂತೆ ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸೂಚನೆ

ಹೊಸದಿಲ್ಲಿ, ಎ.27: ದೇಶವ್ಯಾಪಿ ಲಾಕ್‌ಡೌನ್ ನಡುವೆ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಮರಳಲು ಅವಕಾಶ ಕಲ್ಪಿಸಬೇಕು ಎಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗೆ ಒಂದು ವಾರದೊಳಗೆ ಉತ್ತರಿಸುವಂತೆ ಸರ್ವೋಚ್ಚ ನ್ಯಾಯಾಲಯವು ಸೋಮವಾರ ಕೇಂದ್ರಕ್ಕೆ ನಿರ್ದೇಶ ನೀಡಿದೆ. ವಲಸೆ ಕಾರ್ಮಿಕರು ತಮ್ಮ ಗ್ರಾಮಗಳಿಗೆ ಮರಳಲು ಯಾವುದೇ ಪ್ರಸ್ತಾವವನ್ನು ಸಿದ್ಧಗೊಳಿಸಲಾಗಿದೆಯೇ ಎನ್ನುವುದಕ್ಕೆ ಮಾತ್ರ ಕೇಂದ್ರವು ಉತ್ತರಿಸಬೇಕು ಎಂದು ಅದು ತಿಳಿಸಿದೆ.
ಸರಕಾರದ ಪರವಾಗಿ ಅರ್ಜಿಯನ್ನು ವಿರೋಧಿಸಿದ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರು ವಿಚಾರಣೆಯನ್ನು ಎರಡು ವಾರ ಮುಂದೂಡುವಂತೆ ಪೀಠವನ್ನು ಆಗ್ರಹಿಸಿದರು.
ಇತರ ಕೆಲವು ವ್ಯಕ್ತಿಗಳಂತೆ ಸರಕಾರಕ್ಕೂ ವಲಸೆ ಕಾರ್ಮಿಕರಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಕಾಳಜಿಯಿದೆ. ಎಷ್ಟು ವಲಸೆ ಕಾರ್ಮಿಕರನ್ನು ಸ್ವಗ್ರಾಮಗಳಿಗೆ ರವಾನಿಸಬಹುದು ಹಾಗೂ ಎಷ್ಟು ಜನರಿಗೆ ಯಾವ ವಿಧದಲ್ಲಿ ನೆರವು ನೀಡಬೇಕು ಎಂಬ ಬಗ್ಗೆ ಸರಕಾರವು ರಾಜ್ಯಗಳೊಂದಿಗೆ ಸಮಾಲೋಚನೆಗಳನ್ನು ನಡೆಸುತ್ತಿದೆ ಎಂದು ಅವರು ತಿಳಿಸಿದರು.
ಮಾಧ್ಯಮ ವರದಿಯೊಂದನ್ನು ಪೀಠದ ಗಮನಕ್ಕೆ ತಂದ ಅರ್ಜಿದಾರರ ಪರ ವಕೀಲ ಪ್ರಶಾಂತ್ ಭೂಷಣ್ ಅವರು,ಶೇ.96ರಷ್ಟು ವಲಸೆ ಕಾರ್ಮಿಕರಿಗೆ ವೇತನಗಳನ್ನು ನೀಡಲಾಗಿಲ್ಲ,ಅವರಿಗೆ ಸಾಕಷ್ಟು ಆಹಾರವನ್ನೂ ಪೂರೈಸಲಾಗಿಲ್ಲ. ಕೋವಿಡ್-19 ಸೋಂಕು ಇಲ್ಲವೆಂದು ದೃಢಪಟ್ಟಿರುವವರು ತಮ್ಮ ಊರುಗಳಿಗೇಕೆ ಮರಳಬಾರದು ಎಂದು ಪ್ರಶ್ನಿಸಿದರು. ಈ ವೇಳೆ ಮೆಹ್ತಾ ಅವರು ಮಾಧ್ಯಮದ ವರದಿ ತಪ್ಪಾಗಿದೆ ಎಂದು ಪ್ರತಿಪಾದಿಸಿದರು.
ವಲಸೆ ಕಾರ್ಮಿಕರನ್ನು ವಾಪಸ್ ಕರೆಸಿಕೊಳ್ಳಲು ಕೆಲವು ರಾಜ್ಯಗಳು ಬಯಸಿವೆಯಾದರೂ ಅದು ಸಾಧ್ಯವಾಗುತ್ತಿಲ್ಲ ಎಂದ ಭೂಷಣ್,ಕೇಂದ್ರವು ಜನರ ಮೂಲಭೂತ ಹಕ್ಕುಗಳಿಗೆ ಅಡ್ಡಿಯನ್ನುಂಟು ಮಾಡುತ್ತಿದೆ ಎಂದು ಆರೋಪಿಸಿದರು.
ವಲಸೆ ಕಾರ್ಮಿಕರನ್ನು ತಮ್ಮ ಊರಿಗೆ ವಾಪಸ್ ಕಳುಹಿಸುವ ಕ್ರಮವನ್ನು ಉತ್ತರ ಪ್ರದೇಶ,ಮಹಾರಾಷ್ಟ್ರ,ರಾಜಸ್ಥಾನ ಮತ್ತು ಬಿಹಾರ ಬೆಂಬಲಿಸಿವೆ. ಉತ್ತರ ಪ್ರದೇಶವು ಇತರ ರಾಜ್ಯಗಳಲ್ಲಿರುವ ತನ್ನ ಕಾರ್ಮಿಕರನ್ನು ವಾಪಸ್ ಕರೆಸಿಕೊಳ್ಳುವ ಪ್ರಕ್ರಿಯೆಯನ್ನು ಈಗಾಗಲೇ ಆರಂಭಿಸಿದೆ.
ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ವಿರೋಧಿಸಿದ್ದ ಕೇಂದ್ರವು,ವಲಸೆ ಕಾರ್ಮಿಕರಿಗೆ ತಮ್ಮ ಗ್ರಾಮಗಳಿಗೆ ವಾಪಸಾಗಲು ಅವಕಾಶ ನೀಡಿದರೆ ಕೊರೋನ ವೈರಸ್ ಸೋಂಕು ಹರಡುವಿಕೆಗೆ ಕಾರಣವಾಗುತ್ತದೆ ಎಂದು ತಿಳಿಸಿತ್ತು. ಗೃಹ ಸಚಿವಾಲಯವು ಸಿದ್ಧಪಡಿಸಿದ ವರದಿಯು,ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಮರಳಲು ಅವಕಾಶ ನೀಡಿದರೆ ಈವರೆಗೆ ಬಹುಮಟ್ಟಿಗೆ ಕೊರೋನ ವೈರಸ್‌ನಿಂದ ದೂರವಿರುವ ಗ್ರಾಮೀಣ ಪ್ರದೇಶಗಳಿಗೂ ಸೋಂಕು ಹರಡುವ ಅಪಾಯವಿದೆ ಎಂದು ಹೇಳಿದೆ. ದೇಶವು ಅಭೂತಪೂರ್ವ ಸ್ಥಿತಿಯನ್ನು ಎದುರಿಸುತ್ತಿದೆ ಮತ್ತು ಯಾವುದೇ ಕಡೆಯಿಂದ ಯಾರಿಂದಲೂ ಏನಾದರೂ ತಪ್ಪು ನಡೆದರೆ ಅದು ಅಮೂಲ್ಯ ಮಾನವ ಜೀವಗಳ ಬಲಿಗೆ ಕಾರಣವಾಗಬಹುದು ಎಂದೂ ವರದಿಯಲ್ಲಿ ಹೇಳಲಾಗಿದೆ.







