ಲಾಕ್‌ಡೌನ್ ಉಲ್ಲಂಘಿಸಿದ ಗುಂಪಿನಿಂದ ಪೊಲೀಸ್ ಅಧಿಕಾರಿಗಳಿಗೆ ಹಲ್ಲೆ, ನಾಲ್ವರ ಬಂಧನ

ಮುಂಬೈ, ಎ.27: ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿದ ಗುಂಪೊಂದು ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಘಟನೆ ಇಲ್ಲಿಯ ಗೋವಂಡಿ ಉಪನಗರದ ಶಿವಾಜಿ ನಗರದಲ್ಲಿ ರವಿವಾರ ಸಂಜೆ ನಡೆದಿದ್ದು,ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿ ಇಬ್ಬರು ಮಹಿಳೆಯರು ಸೇರಿದಂತೆ 30 ಜನರ ಗುಂಪೊಂದು ಶಿವಾಜಿ ನಗರದಲ್ಲಿ ಸುತ್ತುತ್ತಿದ್ದ ಮಾಹಿತಿ ಪಡೆದ ಪೊಲೀಸ್ ತಂಡ ಅಲ್ಲಿಗೆ ಧಾವಿಸಿತ್ತು.
ಗುಂಪು ಪೊಲೀಸರತ್ತ ಕಲ್ಲು ತೂರಾಟ ನಡೆಸಿತ್ತಲ್ಲದೆ ಅವರ ವಿರುದ್ಧ ಘೋಷಣೆಗಳನ್ನೂ ಕೂಗಿತ್ತು. ಒಂದು ಪೊಲೀಸ್ ವಾಹನಕ್ಕೂ ಹಾನಿಯನ್ನುಂಟು ಮಾಡಲಾಗಿದೆ. ಗುಂಪಿನಲ್ಲಿದ್ದ ಯುವಕನೋರ್ವ ಕಬ್ಬಿಣದ ಸರಳಿನಿಂದ ಹಲ್ಲೆ ನಡೆಸಿದ ಪರಿಣಾಮ ಪೊಲೀಸ್ ಇನ್ಸ್‌ಪೆಕ್ಟರ್ ಓರ್ವರ ಕೈಗೆ ಗಾಯವಾಗಿದೆ ಎಂದು ಶಿವಾಜಿ ನಗರ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ಸುದರ್ಶನ ಪೈಠಣಕರ ತಿಳಿಸಿದರು.
8,000ಕ್ಕೂ ಅಧಿಕ ಕೋವಿಡ್-19 ಪ್ರಕರಣಗಳು ಮತ್ತು 342 ಸಾವುಗಳು ದಾಖಲಾಗುವುದರೊಂದಿಗೆ ಮಹಾರಾಷ್ಟ್ರವು ಇಡೀ ದೇಶದಲ್ಲಿ ಅತ್ಯಂತ ಪೀಡಿತ ರಾಜ್ಯವಾಗಿದೆ. ಮುಂಬೈ ಮಹಾನಗರವೊಂದರಲ್ಲೇ 5,000ಕ್ಕೂ ಅಧಿಕ ಸೋಂಕು ಪ್ರಕರಣಗಳು ವರದಿಯಾಗಿವೆ.





