ನಾಗಮಂಗಲ ಕೊರೋನ ಸೋಂಕಿತನ ಉಡುಪಿ ಸಂಪರ್ಕಿತರು ಕ್ವಾರಂಟೈನ್‌ಗೆ
ಮರವಂತೆ ಪೆಟ್ರೋಲ್ ಬಂಕ್ ಸೀಲ್

ಉಡುಪಿ, ಎ.27: ಇಂದು ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಕೊರೋನ ವೈರಸ್ ಸೋಂಕಿಗೆ ಪಾಸಿಟಿವ್ ಆಗಿರುವ ಮುಂಬೈ ಹೊಟೇಲೊಂದರ ಉದ್ಯೋಗಿ 50ರ ಹರೆಯದ ರೋಗಿ ನಂ.505, ಲಾಕ್‌ಡೌನ್ ನಡುವೆಯೇ ಮುಂಬೈಯಿಂದ ಮಂಡ್ಯಕ್ಕೆ ಕ್ಯಾಂಟರ್‌ನಲ್ಲಿ ಪ್ರಯಾಣಿಸುವಾಗ ಉಡುಪಿಯಲ್ಲಿ ಸ್ನಾನ ಹಾಗೂ ತಿಂಡಿಗೆಂದು ಇಳಿದಿರುವುದು ಇದೀಗ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯ ತಲೆನೋವಿಗೆ ಕಾರಣವಾಗಿದೆ.
ಈತ ಎ.22ರಂದು ನಾಗಮಂಗಲ ತಲುಪಿದ್ದು, 24ಕ್ಕೆ ಕೊರೋನ ಸೋಂಕಿನ ಪರೀಕ್ಷೆಗೊಳಗಾಗಿದ್ದರು. ಇಂದು ಅವರ ಸ್ಯಾಂಪಲ್ ಪಾಸಿಟಿವ್ ಬಂದಿದೆ. ಈ ಸೋಂಕಿತ ಮುಂಬೈಯಿಂದ ಎ.20ರಂದು ಖರ್ಜೂರ ಸಾಗಿಸುವ ಕ್ಯಾಂಟರ್ ನಲ್ಲಿ ಪ್ರಯಾಣ ಬೆಳೆಸಿದ್ದು, ಉಡುಪಿಗೆ ಬಂದು ಇಲ್ಲಿನ ಪೆಟ್ರೋಲ್ ಬಂಕ್ ಬಳಿ ಸ್ನಾನ ವಾಡಿ, ಅಲ್ಲೇ ತಿಂಡಿ ತಿಂದಿದ್ದ ಎನ್ನಲಾಗಿದೆ.
ಇದೀಗ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಆತ ಸ್ನಾನ ಮಾಡಿದ, ತಿಂಡಿ ಸೇವಿಸಿದ ಸ್ಥಳವನ್ನು ಪತ್ತೆ ಹಚ್ಚಿದ್ದು, ಅದು ಮರವಂತೆಯ ಐಓಸಿ ಪೆಟ್ರೋಲ್ ಬಂಕ್ ಎಂದು ಗುರುತಿಸಿದೆ. ಇದೀಗ ಈ ಪೆಟ್ರೋಲ್ ಬಂಕ್‌ನ್ನು ಸೀಲ್ ಮಾಡಲಾಗಿದ್ದು, ಅಲ್ಲಿನ ಎಲ್ಲಾ ಕೆಲಸಗಾರರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಇಂದು ರಾತ್ರಿ ಪತ್ರಿಕೆಗೆ ತಿಳಿಸಿದ್ದಾರೆ.
ಆತ ಇಲ್ಲಿ ಸ್ನಾನ ಮಾಡಿದ್ದು, ಬಳಿಕ ತಾನು ತಂದ ತಿಂಡಿಯನ್ನು ತಿಂದಿದ್ದಾನೆ. ಹೀಗಾಗಿ ಪೆಟ್ರೋಲ್ ಬಂಕ್‌ನ್ನು ಸೀಲ್ ಮಾಡಿ, ಅಲ್ಲಿನ ಮ್ಯಾನೇಜರ್ ಸೇರಿದಂತೆ ಎಲ್ಲಾ ಕೆಲಸಗಾರರನ್ನು ಕ್ವಾರಂಟೈನ್‌ನಲ್ಲಿರಿಸಲಾಗಿದೆ. ಅಲ್ಲದೇ ಆತ ಸ್ನಾನ ಮಾಡಿದ ಬಳಿಕ ಯಾರ್ಯಾರು ಅಲ್ಲಿ ಸ್ನಾನ ಮಾಡಿದ್ದಾರೆ ಎಂಬ ಮಾಹಿತಿ ಯನ್ನೂ ಕಲೆ ಹಾಕಲಾಗುತ್ತಿದೆ. ಅವರನ್ನು ಹಾಗೂ ಬೇರೆ ಯಾರಾದರೂ ಅವರ ಸಂಪರ್ಕಕ್ಕೆ ಬಂದಿದ್ದರೇ ಎಂಬ ಮಾಹಿತಿ ಪಡೆದು ಅವರನ್ನು ಸಹ ಕ್ವಾರಂಟೈನ್‌ನಲ್ಲಿರಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.







