ಬೆಳೆಹಾನಿ: ರೈತರಿಗೆ ಶೀಘ್ರದಲ್ಲೇ ಪರಿಹಾರ; ಡಿಸಿಎಂ ಸವದಿ ಭರವಸೆ

ರಾಯಚೂರು, ಎ.27: ಜಿಲ್ಲೆಯ ಬೆಳೆಹಾನಿ ಪ್ರದೇಶಗಳ ವೀಕ್ಷಣೆ ನಡೆಸಿದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಶೀಘ್ರದಲ್ಲಿಯೇ ಸಂಕಷ್ಟಕ್ಕೊಳಗಾದವರಿಗೆ ಪರಿಹಾರ ಕೊಡಿಸುವಂತೆ ಭರವಸೆ ನೀಡಿದರು.
ಜಿಲ್ಲೆಯ ಸಿರವಾರಕ್ಕೆ ಭೇಟಿ ನೀಡಿ ಹಾನಿಯಾದ ಬೆಳೆಗಳನ್ನ ವೀಕ್ಷಣೆ ಮಾಡಿದರು. ಇದೇ ವೇಳೆ ಬೆಳೆ ಹಾನಿಗೆ ಸರಕಾರದಿಂದ ಬರುವ ಪರಿಹಾರವನ್ನ ಶೀಘ್ರದಲ್ಲೇ ರೈತರಿಗೆ ತಲುಪುವಂತೆ ಮಾಡುತ್ತೇವೆ ಅಂತ ಹೇಳಿದರು.
ಬೆಳೆಹಾನಿಯಾದ ರೈತರೊಂದಿಗೆ ಚರ್ಚೆ ಮಾಡಿ ಧೈರ್ಯಗೆಡದಂತೆ ಸಮಾಧಾನ ಹೇಳಿದರು. ಎಪ್ರಿಲ್ 20ರಂದು ಅಕಾಲಿಕ ಮಳೆಯಿಂದಾಗಿ ಭತ್ತ ಸೇರಿದಂತೆ ಜಿಲ್ಲೆಯ ವಿವಿಧ ಬೆಳೆಗಳು ಹಾನಿಯಾಗಿವೆ ಎಂದು ಮಾಹಿತಿ ನೀಡಿದರು.
ಲಿಂಗಸುಗೂರು, ಮಾನ್ವಿ, ಸಿರವಾರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಮಳೆಯಿಂದಾಗಿ ಅಪಾರ ಹಾನಿ ಸಂಭವಿಸಿದೆ. ಕಟಾವಿಗೆ ಬಂದಿದ್ದ ಸುಮಾರು 8 ಸಾವಿರ ಹೆಕ್ಟರ್ ಗೂ ಅಧಿಕ ಪ್ರದೇಶದಲ್ಲಿ ಬೆಳೆದಿದ್ದ ಕೋಟ್ಯಂತರ ರೂ. ಮೌಲ್ಯದ ಭತ್ತ ಹಾನಿಯಾಗಿದೆ. ಪಪ್ಪಾಯ, ಅಂಜೂರ ಸೇರಿದಂತೆ ಸುಮಾರು 50 ಹೆಕ್ಟರ್ ನಲ್ಲಿ ಬೆಳೆದ ತೋಟಗಾರಿಕೆ ಬೆಳೆಗಳು ಸಹ ಹಾಳಾಗಿವೆ. ಈ ಹಿನ್ನೆಲೆ ಬೆಳೆಹಾನಿ ಪ್ರದೇಶ ವೀಕ್ಷಣೆ ನಡೆಸಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ರೈತರಿಗೆ ಪರಿಹಾರದ ಭರವಸೆ ನೀಡಿದ್ದಾರೆ.
ಬೆಳೆಹಾನಿ ಪ್ರದೇಶ ವೀಕ್ಷಣೆ ಬಳಿಕ ರಾಯಚೂರಿನ ಜಿಪಂ ಸಭಾಂಗಣದಲ್ಲಿ ಕೊರೋನ ಹಿನ್ನೆಲೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ಸಭೆ ನಡೆಸಿದ್ದಾರೆ. ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಮೇಲೆ ಲಕ್ಷ್ಮಣ ಸವದಿ ಎರಡನೇ ಬಾರಿಗೆ ಕೊರೋನ ಹಿನ್ನೆಲೆ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ. ಇದಕ್ಕೂ ಮುನ್ನ ಕೋವಿಡ್-19 ಪರೀಕ್ಷಿಸುವ ಮೊಬೈಲ್ ಫೀವರ್ ಕ್ಲಿನಿಕ್ ವಾಹನಕ್ಕೆ ಉಪ ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಚಾಲನೆ ನೀಡಿದರು.







