ರೈತರ ಸಂಕಷ್ಟಕ್ಕೆ ನೆರವಾದ ಕೃಷ್ಣಬೈರೇಗೌಡ: 15 ದಿನಗಳಲ್ಲಿ 230 ಟನ್ ತರಕಾರಿ ಖರೀದಿಸಿ ವಿತರಣೆ

ಬೆಂಗಳೂರು, ಎ.27: ಲಾಕ್‍ಡೌನ್ ಪರಿಣಾಮ ರೈತರು ತಮ್ಮ ಕೃಷಿ ಬೆಳೆಗಳನ್ನು ಮಾರಲಾಗದೆ ಕಂಗಾಲಾಗಿದ್ದ ಸಂದರ್ಭದಲ್ಲಿ ಅವರ ನೆರವಿಗೆ ಧಾವಿಸಿದ ಶಾಸಕ ಕೃಷ್ಣಬೈರೇಗೌಡ, ಕಳೆದ 15 ದಿನಗಳಲ್ಲಿ ವಿವಿಧ ಕಡೆಗಳಲ್ಲಿ ರೈತರಿಂದ 230 ಟನ್‍ನಷ್ಟು ತರಕಾರಿ ಖರೀದಿ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಕೊರೋನ ಸೋಂಕನ್ನು ನಿಯಂತ್ರಿಸು ನಿಟ್ಟಿನಲ್ಲಿ ದಿಢೀರನೇ ದೇಶಾದ್ಯಂತ ಲಾಕ್‍ಡೌನ್ ಘೋಷಿಸಿದರು. ಇದರ ಪರಿಣಾಮವಾಗಿ ದೇಶದ ಎಲ್ಲ ವರ್ಗದ ಜನತೆ ಕಂಗಾಲಾದರು. ರೈತರು ಸಾಲ ಮಾಡಿ, ಬೆವರು ಸುರಿಸಿ ಬೆಳೆದ ಕೃಷಿ ಬೆಳೆಗಳನ್ನು ಮಾರಾಟ ಮಾಡಲಾಗದಂತಹ ಪರಿಸ್ಥಿತಿ ನಿರ್ಮಾಣವಾಯಿತು.
ಕಲಬುರಗಿಯಲ್ಲಿ ಕಲ್ಲಂಗಡಿ ಬೆಳೆದ ರೈತ, ತನ್ನ ಬೆಳೆಯನ್ನು ಮಾರಾಟ ಮಾಡಲಾಗದೆ ಮನನೊಂದು ಆತ್ಮಹತ್ಯೆಗೆ ಶರಣಾದ. ಈ ಪ್ರಕರಣವು ರಾಜ್ಯಾದ್ಯಂತ ಸಂಚಲನ ಉಂಟು ಮಾಡಿತು. ಇದರ ಪರಿಣಾಮ ಶಾಸಕ ಕೃಷ್ಣಬೈರೇಗೌಡ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ರೈತರು ಬೆಳೆದ ಬೆಳೆಗಳನ್ನು ಖರೀದಿ ಮಾಡುವಂತಹ ಪ್ರಕ್ರಿಯೆಗೆ ಮುಂದಾದರು.
ಶಾಸಕ ಕೃಷ್ಣಬೈರೇಗೌಡ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಸ್ವಯಂ ಸೇವಕರು, ದಾನಿಗಳು ರೈತರಿಂದ ಹೆಚ್ಚಿನ ಬೆಲೆಗೆ ತರಕಾರಿ ಖರೀದಿಸಿ ಬ್ಯಾಟರಾಯನಪುರ ಕ್ಷೇತ್ರದ ಕೊಡಗೆಹಳ್ಳಿ, ಥಣಿಸಂದ್ರ, ಜಾಲಹೊಬಳಿ, ಬಾಗಲೂರು, ನವರತ್ನಅಗ್ರಹಾರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ತರಕಾರಿಗಳನ್ನು ವಿತರಿಸಲಾಗಿದೆ.
ಈ ಕುರಿತು ಟ್ವೀಟ್ ಮಾಡಿರುವ ಕೃಷ್ಣಬೈರೇಗೌಡ, ಕೊರೋನ ಸೋಂಕಿನಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ರೈತರಿಗೆ ಹಾಗೂ ಸಾರ್ವಜನಿಕರಿಗೆ ನೆರವಿಗೆ ಸಾಕಷ್ಟು ಸಂಖ್ಯೆಯಲ್ಲಿ ದಾನಿಗಳು, ಸ್ವಯಂ ಸೇವಕರು ಸ್ವಯಂಪ್ರೇರಿತವಾಗಿ ಆಗಮಿಸಿದ್ದರ ಪರಿಣಾಮವಾಗಿ ರೈತರಿಂದ ಉತ್ತಮ ಬೆಲೆಗೆ ತರಕಾರಿಗಳನ್ನು ಕೊಂಡುಕೊಳ್ಳಲು ಹಾಗೂ ಆ ತರಕಾರಿಗಳನ್ನು ಸಾರ್ವಜನಿಕರಿಗೆ ಉಚಿತವಾಗಿ ಹಂಚಲು ಸಾಧ್ಯವಾಯಿತು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.








