ಬೆಂಗಳೂರು: 1.35 ಲಕ್ಷ ರೂ. ಮೌಲ್ಯದ ನಕಲಿ ಮದ್ಯ, ಇತರೆ ವಸ್ತುಗಳು ಜಪ್ತಿ

ಬೆಂಗಳೂರು, ಎ.27: ಬೆಂಗಳೂರು ನಗರದ ಯಲಹಂಕದಲ್ಲಿರುವ ಮಿಟ್ಟಗಾನಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ನಡೆಸಲಾದ ಅಬಕಾರಿ ದಾಳಿಯಲ್ಲಿ ಸುಮಾರು 1,35,170 ರೂ.ಮೌಲ್ಯದ ನಕಲಿ ಮದ್ಯವನ್ನು ವಶಪಡಿಸಿಕೊಂಡು ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ ಎಂದು ಅಬಕಾರಿ ಉಪ ಆಯುಕ್ತ ಪಿ.ಎಸ್.ಶ್ರೀನಾಥ್ ತಿಳಿಸಿದ್ದಾರೆ.
ಯಲಹಂಕ ವಲಯ ಕಚೇರಿ ವ್ಯಾಪ್ತಿಯ ಕಣ್ಣೂರು ಗ್ರಾಮ ಪಂಚಾಯತ್, ಮಿಟ್ಟಗಾನಹಳ್ಳಿಯಲ್ಲಿರುವ ಮುನಿರಾಜು ಸಿ.ಎನ್, ಎಂಬುವರ ಮನೆಯಲ್ಲಿ ನಕಲಿ ಮದ್ಯವನ್ನು ತಯಾರಿಸುತ್ತಿದ್ದಾರೆ ಎಂಬ ಮಾಹಿತಿಯ ಮೇರೆಗೆ ಪಿ.ಎಸ್.ಶ್ರೀನಾಥ್ ಮತ್ತು ಯಶವಂತಪುರ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕ ಜಿ.ವಿವೇಕ್ ಮಾರ್ಗದರ್ಶನದಂತೆ ದಾಳಿ ನಡೆಸಿ ನಕಲಿ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.
ದಾಳಿ ನಡೆದ ಸ್ಥಳದಲ್ಲಿ 2.250 ಲೀಟರ್ ನಕಲಿ ಮದ್ಯ(2,250 ರೂ.ಮೌಲ್ಯ), ವಿವಿಧ ಬ್ರಾಂಡ್‍ಗಳ 15,640 ಲೇಬಲ್‍ಗಳು(46,920 ರೂ.ಮೌಲ್ಯ), ಒಟ್ಟು 14,890 ನಕಲಿ ಎಕ್ಸೈಸ್ ಅಡೆಸಿವ್ ಲೇಬಲ್‍ಗಳು, ವಿವಿಧ ಬ್ರಾಂಡ್‍ಗಳ ಹಾಗೂ ಬ್ರಾಂಡ್ ಹೆಸರು ಇಲ್ಲದಂತಹ 54.400 ಕಿಲೋ ನಕಲಿ ಮುಚ್ಚಳಗಳು, ನೋಂದಣಿ ಸಂಖ್ಯೆ ಕೆಎ53-ಇಡಬ್ಲ್ಯು-0390 ಇರುವ ಬಿಳಿ ಬಣ್ಣದ ಹೊಂಡಾ ಆಕ್ಟೀವಾ 4ಜಿ ದ್ವಿಚಕ್ರ ವಾಹನ(ಮೌಲ್ಯ 60 ಸಾವಿರ ರೂ.) ಹಾಗೂ ನಕಲಿ ಮದ್ಯದ ಬಾಟಲುಗಳ ಕ್ಯಾಪ್ ತ್ರೆಡ್ಡಿಂಗ್ ಮಾಡಲು ಬಳಸುವ ಒಂದು ಕಬ್ಬಿಣದ ಹ್ಯಾಂಡ್ ಮೆಷಿನ್(25 ಸಾವಿರ ರೂ.ಮೌಲ್ಯ)ಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಸ್ಥಳದಲ್ಲಿದ್ದ ಆರೋಪಿಗಳಾದ ಮುನಿರಾಜು ಸಿ.ಎನ್., ಚೇತನ್‍ಕುಮಾರ್ ಅವರನ್ನು ದಸ್ತಗಿರಿ ಮಾಡಲಾಗಿದೆ. ಈ ಸಂಬಂಧ ಯಲಹಂಕ ವಲಯದ ಅಬಕಾರಿ ನಿರೀಕ್ಷಕರು ಎಫ್‍ಐಆರ್ ದಾಖಲು ಮಾಡಿ, ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ ಎಂದು ಶ್ರೀನಾಥ್ ತಿಳಿಸಿದ್ದಾರೆ.







