ದೇಶದಲ್ಲಿ ಕೊರೋನ ಸೋಂಕಿತರ ಸಂಖ್ಯೆ 30 ಸಾವಿರಕ್ಕೆ ಸನಿಹ

ಹೊಸದಿಲ್ಲಿ, ಎ.28: ಮಧ್ಯಪ್ರದೇಶದ ಇಂಧೋರ್‌ನಲ್ಲಿ ತಡರಾತ್ರಿ ಹಲವು ಕೊರೋನ ವೈರಸ್ ಪ್ರಕರಣಗಳು ವರದಿಯಾಗಿದ್ದು, ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 29,571ಕ್ಕೇರಿದೆ. ಸೋಮವಾರ ಒಟ್ಟು 1,709 ಪ್ರಕರಣಗಳು ದೃಢಪಟ್ಟಿದ್ದು, 58 ಮಂದಿ ಜೀವ ಕಳೆದುಕೊಂಡಿದ್ದಾರೆ.
ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲಿ ಗರಿಷ್ಠ ಸಂಖ್ಯೆಯ ಪ್ರಕರಣಗಳು ವರದಿಯಾಗಿದ್ದು, ಕ್ರಮವಾಗಿ 522 ಹಾಗೂ 247 ಹೊಸ ಪ್ರಕರಣಗಳು ದಾಖಲಾಗಿವೆ. ಕೆಲ ನಗರಗಳಲ್ಲಿ ಆತಂಕಕಾರಿ ಪ್ರಮಾಣದಲ್ಲಿ ಸೋಂಕು ವ್ಯಾಪಿಸುತ್ತಿದ್ದು, ಇಂಧೋರ್‌ನಲ್ಲಿ 196 ಹೊಸ ಪ್ರಕರಣಗಳು ದೃಢಪಟ್ಟಿವೆ. ಮುಂಬೈನಲ್ಲಿ 369 ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ. ದಿಲ್ಲಿಯಲ್ಲಿ 190 ಪಾಸಿಟಿವ್ ಪ್ರಕರಣಗಳೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 3,000 ದಾಟಿದೆ. ಇದುವರೆಗೆ ಸೋಂಕು ನಿಯಂತ್ರಣದಲ್ಲಿದ್ದ ಬಿಹಾರ ಹಾಗೂ ಜಾರ್ಖಂಡ್‌ನಲ್ಲಿ ದಿಢೀರನೇ ಪ್ರಕರಣಗಳು ಹೆಚ್ಚಿದ್ದು, ಒಂದೇ ದಿನ ಕ್ರಮವಾಗಿ 68 ಹಾಗೂ 20 ಪ್ರಕರಣಗಳು ವರದಿಯಾಗಿವೆ.
ಮಹಾರಾಷ್ಟ್ರದಲ್ಲಿ ಸೋಮವಾರ ಒಂದೇ ದಿನ 27 ಮಂದಿ ಕೋವಿಡ್-19 ಸೋಂಕಿತರು ಮೃತಪಟ್ಟಿದ್ದು, ಗುಜರಾತ್ (11), ರಾಜಸ್ಥಾನ (9), ಮಧ್ಯಪ್ರದೇಶ (7) ಹಾಗೂ ಪಶ್ಚಿಮ ಬಂಗಾಳ (2) ನಂತರದ ಸ್ಥಾನಗಳಲ್ಲಿವೆ. ಪಂಜಾಬ್ ಹಾಗೂ ಉತ್ತರ ಪ್ರದೇಶದಲ್ಲೂ ತಲಾ ಒಂದು ಸಾವು ಸಂಭವಿಸಿದೆ. ದೇಶದಲ್ಲಿ ಮೃತಪಟ್ಟ ಕೊರೋನ ಸೋಂಕಿತರ ಸಂಖ್ಯೆ 937ಕ್ಕೇರಿದೆ. ದೇಶದಲ್ಲಿ ಸತತ ಮೂರನೇ ದಿನ 50ಕ್ಕೂ ಹೆಚ್ಚು ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಮಹಾರಾಷ್ಟ್ರದಲ್ಲಿ ಗರಿಷ್ಠ (369) ಸಾವು ಸಂಭವಿಸಿದ್ದು, ಮುಂಬೈ ಮಹಾನಗರದಲ್ಲೇ 219 ಮಂದಿ ಜೀವ ಕಳೆದುಕೊಂಡಿದ್ದಾರೆ. ಮಹಾರಾಷ್ಟ್ರದಲ್ಲಿ ಸೋಮವಾರ 522 ಹೊಸ ಪ್ರಕರಣಗಳು ವರದಿಯಾಗಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 8,590ಕ್ಕೇರಿದೆ. ಅಹ್ಮದಾಬಾದ್‌ನಲ್ಲಿ ಸಾಂಕ್ರಾಮಿಕ ಸ್ಥಿತಿ ಆತಂಕಕಾರಿಯಾಗಿದ್ದು, ಒಟ್ಟು ಸೋಂಕಿತರ ಪೈಕಿ ಶೇಕಡ 4.7ರಷ್ಟು ಮಂದಿ ಮೃತಪಟ್ಟಿದ್ದಾರೆ. ಮುಂಬೈನಲ್ಲಿ ಸಾವಿನ ಪ್ರಮಾಣ 3.8% ಇದೆ.







